ಪಾಂಡವಪುರ: ತಾಲೂಕಿನಲ್ಲಿರುವ 24 ಗ್ರಾಪಂ ವ್ಯಾಪ್ತಿಯಲ್ಲೂ ಕುಡಿಯುವ ನೀರಿಗೆ ಯಾವುದೇ ತೊಂದರೆ ಎದುರಾಗದಂತೆ ಕ್ರಮವಹಿಸ ಲಾಗಿದೆ. ತಾಪಂನಲ್ಲಿ ಬಸವ ವಸತಿ ಯೋಜನೆಯಡಿ 480 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳನ್ನು ಆಯ್ಕೆಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಾಪಂ ಅಧ್ಯಕ್ಷೆ ಸುಮಲತಾ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನರೇಗಾ ಯೋಜನೆಯಲ್ಲಿ ಶೇ.48 ಪ್ರಗತಿ ಸಾಧಿಸಿದ್ದೇವೆ. ತಾಲೂಕು ಪಂಚಾಯಿತಿಗೆ 2 ಕೋಟಿ ಅನುದಾನ ಬಂದಿದ್ದೂ ಎಲ್ಲದಕ್ಕೂ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರು.
ಅರಣ್ಯ ಇಲಾಖೆಗಳಿಂದ ಮರಗಳನ್ನು ಬೆಳೆಸಿ ಪ್ಲಾಂಟೇಷನ್ ಮಾಡುವುದಕ್ಕಾಗಿ ರೈತರಿಗೆ ನೀಡಲಾಗುತ್ತಿದೆ. ಗಿಡಗಳ ಅವಶ್ಯಕತೆ ಇರುವ ರೈತರು ಗಿಡಗಳನ್ನು ಪಡೆದು ನಾಟಿ ಮಾಡಿ, ಇಲ್ಲ ಖಾಲಿ ಜಾಗ ಇರುವ ರೈತರು ನಮಗೆ ಮನವಿಸಲ್ಲಿಸಿದರೆ ನಾವೇ ಗಿಡಗಳನ್ನು ನಾಟಿ ಮಾಡಿಸುತ್ತೇವೆ ಎಂದರು.
ಕೆಆರ್‌ಎಸ್ ಹಿನ್ನೀರು ಹಾಗೂ ನಾಲೆಗಳ ಬದಿಯಲ್ಲಿ ಗಿಡಗಳನ್ನು ನಾಟಿ ಮಾಡುವಂತೆ ಈಗಾಗಲೇ ಸೂಚನೆ ಬಂದಿದೆ. ಆದ್ದರಿಂದ ತೋಟಗಾರಿಗೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಆ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ತೋಟಗಾರಿಗೆ ಇಲಾಖೆಯಿಂದ ಹಣ್ಣಿನ ಗಿಡಗಳನ್ನು ನೆಟ್ಟರೆ ಅನುಕೂಲವಾಗುತ್ತದೆ ಎಂದು ಇಒ ಆರ್.ಪಿ.ಮಹೇಶ್ ಸೂಚಿಸಿದರು.
ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ ಮಾತನಾಡಿ, ಸೆಸ್ಕ್ನಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಸುಮಾರು 8800 ಮಂದಿಗೆ 40 ಯೂನಿಟ್ ಮಿತಿಗಳೊಸಿ ವಿದ್ಯುತ್ ನೀಡಲಾಗುತ್ತಿದೆ. 7800 ಮಂದಿ ರೈತರಿಗೆ ನಿತ್ಯ 7 ಗಂಟೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಉಜ್ವಲ ಯೋಜನೆಯಡಿ 165 ರೂ. ಬೆಲೆಬಾಳುವ ವಿದ್ಯುತ್ ಬಲ್ಪ್ಗಳನ್ನು ಕೇವಲ 70 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಎರಡು ಪಂಪ್‌ಸೆಟ್ ಹೊಂದಿರುವ ರೈತರಿಗೆ 1 ಟ್ರಾನ್ಸ್‌ಫಾರ್ಮರ್ ಅಳವಡಿಸುವುದಕ್ಕಾಗಿ 113 ರೈತರಿಗೆ ನೀಡಲಾಗುತ್ತಿದೆ. ಸಬ್ ಸ್ಟೇಷನ್‌ಗಳ ನಿರ್ಮಾಣಕ್ಕೂ ಭೂಮಿ ನೀಡಲಾಗಿದ್ದು ತ್ವರಿತವಾಗಿ ಸಬ್ ಸ್ಟೇಷನ್‌ಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಮಹೇಶ್ ಸರ್ವೇ ನಂಬರ್ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸುವ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗ ಖುದ್ದು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಸೂಚಿಸಿ ದರು. ಸಭೆಯಲ್ಲಿ ಆರೋಗ್ಯ, ತೋಟಗಾರಿಕೆ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ರೇಷ್ಮೆ, ಹೇಮಾವತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ವಿವರವನ್ನು ಅಧಿಕಾರಿಗಳು ನೀಡಿದರು.