Advertisement
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಟಿ.ಡಿ.ರಾಜೇಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ಸುಮಾರು 6,395 ಆನೆಗಳಿದ್ದು, ದೇಶದಲ್ಲಿಯೇ ಇದು ಅತಿ ಹೆಚ್ಚಿನದಾಗಿದೆ. ಆನೆಗಳ ತಡೆಗೆ ಕಂದಕ, ತಂತಿಬೇಲಿ ನಿರ್ಮಾಣ ಫಲ ನೀಡಿಲ್ಲ. ಈಗ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದ್ದು, ಬ್ಯಾರಿಕೇಡ್ ನಿರ್ಮಾಣ ಮಾಡುವ ಮೊದಲ ರಾಜ್ಯ ನಮ್ಮದಾಗಿದೆ. ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷ ತಡೆ ನಿಟ್ಟಿನಲ್ಲಿ ಕ್ರಮಕ್ಕೆ ಬಜೆಟ್‌ನಲ್ಲಿ 100 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು. ಆನೆ ಹಾವಳಿಯಿಂದ ಬೆಳೆ ನಷ್ಟ, ಪ್ರಾಣ ಹಾನಿ ಹೆಚ್ಚುತ್ತಿದ್ದರಿಂದ ಮುಖ್ಯಮಂತ್ರಿ ಜತೆಗೆ ಚರ್ಚಿಸಿ 120 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
Related Articles
Advertisement
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರ ಪಶ್ನೆಗೆ ಉತ್ತರಿಸಿದ ಅವರು, ಪ್ರತಿ 10 ವರ್ಷಗಳಿಗೊಮ್ಮೆ ಅರಣ್ಯ ಗಡಿ ಗುರುತಿಸುವ ಕಾರ್ಯ ನಡೆಯುತ್ತದೆ. ಗಡಿ ಗುರುತಿಸುವಾಗ ಕೃಷಿ ಭೂಮಿ, ಮನೆ, ದೇಗುಲಗಳಿಗೆ ವಿನಾಯಿತಿ ನೀಡಲು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಹೋಗಿ ಪರಿಶೀಲಿಸಲು ಹಾಗೂ ಕಂದಾಯ ಇಲಾಖೆ ಜತೆಗೆ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 60-70 ಗ್ರಾಮಗಳ ವ್ಯಾಪ್ತಿಯನ್ನು ಮೀಸಲು ಅರಣ್ಯ ಪ್ರದೇಶವೆಂದು ಹೇಳಿ ಗಡಿ ಕಲ್ಲು ಹಾಕಲಾಗಿದೆ. ಮಹಾರಾಜರ ಕಾಲದಿಂದಲೂ ಕೃಷಿ ಮಾಡಿಕೊಂಡ ರೈತರು, ಹಲವಾರು ವರ್ಷಗಳಿಂದ ಇರುವ ಮನೆ, ದೇಗುಲ, ಶ್ಮಶಾನಗಳೂ ಇದರ ವ್ಯಾಪ್ತಿಯೊಳಗಿದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಹರೀಶ ಪೂಂಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ವೆಯಲ್ಲಿ ಕಂದಾಯ ಇಲಾಖೆ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದರೆ ಅದನ್ನು ಕಂದಾಯ ಇಲಾಖೆಗೆ ವಾಪಸ್ ನೀಡಲಾಗುವುದು. ಸಾಗುವಳಿ ಭೂಮಿ ಅರಣ್ಯ ಇಲಾಖೆ ಭೂಮಿಯ 100 ಮೀಟರ್ ಅಂತರದೊಳಗಿದ್ದರೆ ಹಾಗೂ ಅಲ್ಲಿ ಗಿಡಮರಗಳಿದ್ದರೆ ರಾಜ್ಯ ಮತ್ತು ಕೇಂದ್ರ ಅರಣ್ಯ ಇಲಾಖೆಯ ಪರವಾನಿಗೆ ಪಡೆದುಕೊಳ್ಳಬೇಕೆಂಬ ನಿಯಮ ಇದ್ದು, ಇದು ಬಹುತೇಕರಿಗೆ ತಿಳಿದಿಲ್ಲ ಎಂದರು.
ರಬ್ಬರ್ ಕಾರ್ಮಿಕರಿಗೆ ಬೋನಸ್ ನೀಡಿ: ಭಾಗೀರಥಿ
ಸುಳ್ಯ ಶಾಸಕಿ ಭಾಗೀರಥಿ ಅವರು ರಬ್ಬರ್ ಕಾರ್ಮಿಕರಿಗೆ ಬೋನಸ್ ಹಾಗೂ ಆನೆ ದಾಳಿಯಿಂದ ಮೃತಪಟ್ಟವರಿಗೆ 25 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಬ್ಬರ್ ಕಾರ್ಮಿಕರಿಗೆ ಶೇ.8.33ರಷ್ಟು ಬೋನಸ್ ನೀಡಲಾಗಿದೆ. ಕಾರ್ಖಾನೆ ನಷ್ಟದಲ್ಲಿದ್ದರೂ ಬೋನಸ್ ನೀಡಲಾಗಿದೆ. ಆನೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ ಎಂದರು.