ಕಟಪಾಡಿ: ಸಮಾಜದಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮಗಳಿಗೆ ಹಣವನ್ನು ಪೋಲು ಮಾಡುವುದಕ್ಕಿಂತ ಅಗತ್ಯವುಳ್ಳ ಕಡುಬಡವರಿಗೆ ಮನೆ ನಿರ್ಮಾಣ ಹಾಗೂ ಅರ್ಹ ಶಿಕ್ಷಣಾ ಕಾಂಕ್ಷಿಗಳಿಗೆ ಶಿಕ್ಷಣಾಶ್ರಯ ನೀಡಿದಲ್ಲಿ ಹೇರಳ ಪುಣ್ಯ ಸಂಪಾದನೆ ಮಾಡಬಹುದು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಟuಲದಾಸ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಬುಧವಾರ ಕಟಪಾಡಿ ಬಳಿಯ ಕೋಟೆ ಗ್ರಾಮದ ದೇವರ ತೋಟದಲ್ಲಿ ಕಳೆದ 6 ದಶಕಗಳಿಂದ ವಿದ್ಯುತ್ ಸೌಕರ್ಯವಿಲ್ಲದ ಹಳೆಯ ಪ್ಲಾಸ್ಟಿಕ್ ಹೊದಿಕೆಯ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದ ಬಡ ರಾಜೀವಿ ಶೆಡ್ತಿ ಕುಟುಂಬಕ್ಕೆ ದಾನಿಗಳ ನೆರವಿನೊಂದಿಗೆ 7.50ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದರು.
ಯಾವುದೇ ಪ್ರಚಾರವಿಲ್ಲದೆ ಬಡಕುಟುಂಬವೊಂದಕ್ಕೆ ಚೊಕ್ಕದಾದ ಸುಂದರ ಮನೆ ನಿರ್ಮಾಣದ ಪರಿಕಲ್ಪನೆಯನ್ನು ವಿವಿಧ ದಾನಿಗಳ ನೆರವಿನಿಂದ ಸಾಕಾರಗೊಳಿಸಿರುವುದು ಮಾದರಿಯಾದ ಕಾರ್ಯಕ್ರಮವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕಿ ವಿದ್ಯಾಲತಾ ಯು. ಶೆಟ್ಟಿ ಬನ್ನಂಜೆ ಮಾತನಾಡಿ, ಕೋಟೆ ಸಮೀಪದ ಬಂಟರ ಬಡಕುಟುಂಬದ ಪರಿಸ್ಥಿತಿಯನ್ನು ಪತ್ರಿಕೆಗಳಲ್ಲಿ ಓದಿದ ಬಳಿಕ ಈ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸುವ ಕನಸು ಬರೇ ಮೂರೇ ತಿಂಗಳಲ್ಲಿ ದಾನಿಗಳ ನೆರವಿನಿಂದ ನನಸಾಗಿದೆ ಎಂದರು.
ಈ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆ ಸಹಕರಿಸಿರುವ ದಾನಿಗಳನ್ನು ಸಮ್ಮಾನಿಸಲಾಯಿತು. ಮನೆ ನಿರ್ಮಾಣದ ರುವಾರಿ ವೈದ್ಯ ಡಾ| ಯು.ಕೆ ಶೆಟ್ಟಿ ಪ್ರಸ್ತಾವನೆಯಲ್ಲಿ ಮಾತನಾಡಿ, ಬಡವರಿಗೆ ಮನೆ ನಿರ್ಮಿಸಿಕೊಡುವುದು ದೇವರ ಕೆಲಸ ಹಾಗಾಗಿ ನಾವು ಕೇಳದೆ ಅನೇಕರು ಸ್ವ ಇಚ್ಛೆಯಿಂದ ಆರ್ಥಿಕ ನೆರವು ನೀಡಿ ಸಹರಿಸಿದ್ದರಿಂದ ಸುಸಜ್ಜಿತವಾದ ಮಾದರಿ ಮನೆಯನ್ನು ನಿರ್ಮಿಸಿಕೊಡಲು ಸಾಧ್ಯವಾಯಿತು ಎಂದರು.
ಸಮಾಜ ಸೇವಕಿ ವೈಶಾಲಿ ಶೆಟ್ಟಿ ಉಡುಪಿ, ಅಶೋಕ್ ಶೆಟ್ಟಿ ಮೂಡಬೆಟ್ಟುಗುತ್ತು , ಡಾ.ಎ. ರವೀಂದ್ರನಾಥ ಶೆಟ್ಟಿ, ಕೆ. ಲೀಲಾಧರ್ ಶೆಟ್ಟಿ, ದಿನಕರ್ ಶೆಟ್ಟಿ ಕುರ್ಕಾಲು, ಹರಿಶ್ಚಂದ್ರ ಅಮೀನ್, ಪುಂಡಲೀಕ ಮರಾಠೆ, ಪ್ರಕಾಶ ಸುವರ್ಣ ಕಟಪಾಡಿ ಉಪಸ್ಥಿತರಿದ್ದರು.
ದಯಾನಂದ ಕೆ.ಶೆಟ್ಟಿ ದೆಂದೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.