ಔರಾದ: ಶೋಷಿತ ಹಾಗೂ ಹಿಂದುಳಿದ ಸಮುದಾಯದವರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕರು ಸಂವಿಧಾನ ಕುರಿತು ಅಧ್ಯಯನ ಮಾಡಿ, ಅದರ ರಕ್ಷಣೆಗೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಹೇಳಿದರು.
ಜಂಬಗಿ ಗ್ರಾಮದಲ್ಲಿ ನಡೆದ ಸಂವಿಧಾನದ ಹಾದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ಭೀಮರಾವ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿ ನಮ್ಮ ರಕ್ಷಣೆ ಮಾಡಿದ್ದಾರೆ. ಅಂಥ ಮಹಾನ್ ವ್ಯಕ್ತಿಯನ್ನು ಪ್ರತಿಯೊಬ್ಬರು ನಿತ್ಯ ನಿರಂತರ ಸ್ಮರಿಸಬೇಕು ಎಂದರು. ದೇಶದ ಪ್ರತಿಯೊಬ್ಬರು ಸ್ವಾಭಿಮಾನದಿಂದ ಗೌರವಿಸಿ ಪೂಜೆ ಸಲ್ಲಿಸಲು ಮುಂದಾಗಬೇಕಾಗಿರುವ ನಮ್ಮ ದೇಶದ ಸಂವಿಧಾನಕ್ಕೆ ಬೆಂಕಿ ಹಚ್ಚುವ ಮುಖಂಡರು ಒಂದಡೆಯಾಗಿದ್ದರೆ, ಇನ್ನೊಂದೆಡೆ ದೇಶದ ಸಂವಿಧಾನವನ್ನೆ ಬದಲಾವಣೆ ಮಾಡುತ್ತೇವೆ ಎಂದು ಕೇಂದ್ರ ಸಚಿವರೊಬ್ಬರು ಬಹಿರಂಗವಾಗಿ ವೇದಿಕೆಯಲ್ಲಿ ಹೇಳಿಕೆ ನೀಡುತ್ತಿರುವುದು ದುಃಖದ ಸಂಗತಿಯಾಗಿದೆ. ಸಂವಿಧಾನದ ರಕ್ಷಣೆ ಮಾಡಿ ಜನರ ಕಲ್ಯಾಣಕ್ಕಾಗಿ ದುಡಿಯಲು ಮುಂದಾಗಬೇಕಾದ ಜನಪ್ರತಿನಿಧಿಗಳು ಇಂಥ ಹೇಳಿಕೆ ನೀಡುವುದು ಅವರ ಹುದ್ದೆಗೆ ಗೌರವ ತರುವುದಿಲ್ಲ ಎಂದರು.
ದಲಿತ ಹಾಗೂ ಹಿಂದುಳಿದ ವರ್ಗದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಅಕ್ಷರಸ್ಥರನ್ನಾಗಿ ಮಾಡಿ, ಮಕ್ಕಳು ದೇಶದ ಸಂವಿಧಾನದ ಬಗ್ಗೆ ಅರಿತು ರಕ್ಷಣೆ ಮಾಡಲು ಮುಂದಾಗುವಂತೆ ಮಾರ್ಗದರ್ಶನ ಮಾಡಬೇಕು ಎಂದರು. ಬಡ ಹಾಗೂ ಹಿಂದುಳಿದ ವರ್ಗದ ಜನರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ಪ್ರತಿವರ್ಷ ವಿನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೆ. ಅವುಗಳ ಸದುಪಯೋಗ ಪಡೆದು ನೆಮ್ಮದಿಯ ಜೀವನ ಸಾಗಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ತಾಲೂಕಿನ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಬೇಸಿಗೆಯಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಜಾಗ್ರತೆಯಿಂದ ಕೆಲಸ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು. ತಾಲೂಕು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದನೆ ಮಾಡಲು ಹಿಂದೇಟು ಹಾಕುತ್ತಿದ್ದರೆ ನಮ್ಮ ಗಮನಕ್ಕೆ ತನ್ನಿ. ತಕ್ಷಣವೇ ಸಮಸ್ಯೆಗೆ ಬಗೆ ಹರಿಸಲಾಗುತ್ತದೆ ಎಂದು ಸಲಹೆ ನೀಡಿದರು.
ಚರಣಸಿಂಗ್ ರಾಠೊಡ, ಸಿದ್ದಪ್ಪ ಬೋರಗೆ, ನಾಗಪ್ಪ ಮಾಸ್ಟರ್, ಮಲ್ಲಿಕಾರ್ಜುನ ಜಂಬಗಿ, ಸಾದುರೆ ಶಿವಕುಮಾರ, ಸಲಾವುದ್ದಿನ ಜಂಬಗಿ ಹಾಗೂ ಇನ್ನಿತರರು ಇದ್ದರು.