ಉಳ್ಳಾಲ: ಭ್ರಷ್ಟಾಚಾರದಿಂದ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಿದ್ದು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗಿದೆ. ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಹಾಗೆಯೇ ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ಸದಾ ಎಚ್ಚರದಿಂದ ಇರಬೇಕು ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಸೋಮವಾರ ನಡೆದ ಎ.ಬಿ. ಶೆಟ್ಟಿ ದಂತ ವಿಜ್ಞಾನ ಮಹಾವಿದ್ಯಾಲಯದ ಸ್ಥಾಪಕ ಡೀನ್ ಪ್ರೊ| ಡಾ| ಎನ್. ಶ್ರೀಧರ್ ಶೆಟ್ಟಿ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಡಾ| ಎನ್. ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸದಲ್ಲಿ “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ಹಾಗೂ ಪ್ರಜೆಗಳ ಹಕ್ಕು’ ವಿಷಯದಲ್ಲಿ ಮಾತನಾಡಿದರು.
85ರ ದಶಕದಲ್ಲೇ ಸರಕಾರದ ಯೋಜನೆಗಳಲ್ಲಿ ಶೇ. 15 ಮಾತ್ರ ಜನರಿಗೆ ತಲುಪುತ್ತಿತ್ತು ಎನ್ನುವ ಸತ್ಯವನ್ನು ಅಂದಿನ ಅಧಿಕಾರ ನಡೆಸುತ್ತಿದ್ದವರು ಒಪ್ಪುತ್ತಿದ್ದರು. ಇಂದಿಗೂ ಸ್ಥಿತಿ ಹಾಗೇ ಇದೆ. ಭ್ರಷ್ಟಾಚಾರವನ್ನು ಅಂಗೀಕರಿಸುವವರ ಪ್ರಶ್ನೆಗಿಂತ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬುದೇ ಜನತೆಯ ಮುಂದಿರುವ ಪ್ರಶ್ನೆಯಾಗಿದೆ. ಅಂತಹ ಸ್ಥಿತಿಯಲ್ಲಿ ಭಾರತ ರಾಮರಾಜ್ಯವಾಗುವುದು ಕನಸಿನ ಮಾತು. ದೇಶಾದ್ಯಂತ ಲೋಕಪಾಲ ಮಸೂದೆಯ ಪರಿಣಾಮಕಾರಿ ಅನುಷ್ಠಾನದ ಆವಶ್ಯಕತೆ ಇದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ವೆಬ್‌ಸೈಟ್ ಅನಾವರಣಗೊಳಿಸಲಾಯಿತು. ಹಳೆವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ನಿಟ್ಟೆ ವಿವಿ ಕುಲಾಧಿಪತಿ ಎನ್. ವಿನಯ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಹ ಕುಲಾಧಿಪತಿ ಪ್ರೊ| ಡಾ| ಎ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಸ್ಥಾಪಕ ಡೀನ್ ಪ್ರೊ| ಡಾ| ಎನ್. ಶ್ರೀಧರ್ ಶೆಟ್ಟಿ, ಕುಲಪತಿ ಪ್ರೊ| ಡಾ| ಸತೀಶ್ ಕುಮಾರ್ ಭಂಡಾರಿ, ಸಹ ಕುಲಪತಿ ಪ್ರೊ| ಡಾ| ಎಂ.ಎಸ್. ಮೂಡಿತ್ತಾಯ, ಪರೀಕ್ಷಾಂಗ ಕುಲಸಚಿವೆ ಪ್ರೊ| ಡಾ| ಅಲ್ಕಾ ಕುಲಕರ್ಣಿ, ದಂತ ವೈದ್ಯಕೀಯ ಕಾಲೇಜಿನ ಡೀನ್ ಪ್ರೊ| ಡಾ| ಯು.ಎಸ್. ಕೃಷ್ಣ ನಾಯಕ್ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಶಿಶಿರ್ ಶೆಟ್ಟಿ ಸ್ವಾಗತಿಸಿದರು. ಡಾ| ಜಿ. ಸುಭಾಷ್ ಬಾಬು ಪರಿಚಯಿಸಿದರು. ಡಾ| ರಕ್ಷಾ ಭಟ್ ಹಾಗೂ ಡಾ| ರಾಹುಲ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಡಾ| ನಿತೇಶ್ ಶೆಟ್ಟಿ ವಂದಿಸಿದರು.