Advertisement

ಸಂವಿಧಾನ ಕುರಿತ ಚರ್ಚೆ: ಸ್ಪೀಕರ್‌ ಕಾಗೇರಿ ಭಾಷಣದಲ್ಲಿ ಕೆಲ ತಿದ್ದುಪಡಿ

12:03 AM Mar 05, 2020 | Lakshmi GovindaRaj |

ವಿಧಾನಸಭೆ: ಸರ್‌ ಬಿ.ಎನ್‌.ರಾವ್‌ ಅವರು ರಚಿಸಿದ ಸಂವಿಧಾನದ ಮೂಲ ಕರಡು ಪ್ರತಿಯನ್ನು ಅಂಬೇಡ್ಕರ್‌ರವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸಲಾಗಿತ್ತು ಎಂಬುದು ಸೇರಿ ನನ್ನ ಪ್ರಾಸ್ತಾವಿಕ ಭಾಷಣದ ಕೆಲ ಅಂಶಗಳನ್ನು ತಿದ್ದುಪಡಿ ಮಾಡಿ ಪರಿಷ್ಕೃತ ಮಾಹಿತಿ ಒದಗಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನಕ್ಕೆ ತಿಳಿಸಿದರು.

Advertisement

ಸಂವಿಧಾನ ಕುರಿತ ವಿಶೇಷ ಚರ್ಚೆ ಸಂಬಂಧ ಮಂಗಳವಾರ ಕಾಗೇರಿ ಮಾಡಿದ ಪ್ರಾಸ್ತಾವಿಕ ಭಾಷಣದಲ್ಲಿ ಉಲ್ಲೇಖೀಸಿದ ಕೆಲ ಅಂಶಗಳಿಗೆ ಬುಧ ವಾರ ಚರ್ಚೆ ವೇಳೆ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ್‌ ಆಕ್ಷೇಪ ವ್ಯಕ್ತಪಡಿಸಿದರು. “ಮೂಲತಃ ಮಂಗಳೂರಿನವರಾದ ಬಿ.ಎನ್‌.ರಾವ್‌ ಅವರು ಭಾರತ ಸಂವಿಧಾನದ ರಚನಾ ಸಭೆಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.

ಅವರು ರಚಿಸಿದ ಸಂವಿಧಾನದ ಮೂಲ ಕರಡು ಪ್ರತಿಯನ್ನು ಅಂಬೇಡ್ಕರ್‌ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸಲಾಗಿತ್ತು. ಈ ಮೂಲ ಕರಡನ್ನು ರಚನಾ ಸಭೆಯಲ್ಲಿ ಚರ್ಚಿಸಿ, ಅಂಬೇಡ್ಕರ್‌ ನೇತೃತ್ವದಲ್ಲಿ ಹಲವು ಮಾರ್ಪಾಡು ಮಾಡಿ ಭಾರತೀಯರ ಸರ್ವತೋಮುಖ ಅಭಿವೃದ್ಧಿಗೆ ಸಮಗ್ರ, ಸಮರ್ಥ ಸಂವಿಧಾನ ರಚಿಸಲಾಗಿದೆ’ ಎಂದು ಕಾಗೇರಿಯವರು ಪ್ರಾಸ್ತಾವಿಕ ಭಾಷಣದಲ್ಲಿ ಉಲ್ಲೇಖೀಸಿದ್ದರು.

ಈ ಬಗ್ಗೆ ಆಕ್ಷೇಪ ತೆಗೆದ ಎಚ್‌.ಕೆ.ಪಾಟೀಲ್‌, ಪೂರ್ವಾಶ್ರಮದ ರಾಜಕೀಯ ಹಿನ್ನೆಲೆಯಲ್ಲಿ ಭಾಷಣ ಮೂಡಿದಂತಿದೆ. ಅವರ ಮಾತುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖವಿಲ್ಲ. ಸೇನಾನಿಗಳ ಪ್ರಸ್ತಾಪವಿಲ್ಲ. ನೆಹರೂ ಅವರ ಪ್ರಸ್ತಾಪವೂ ಇಲ್ಲ. ಸ್ವಾತಂತ್ರ್ಯದ ವಿಚಾರದಲ್ಲಿ ಕಾಂಗ್ರೆಸ್‌ ಸಂಘಟನೆಯ ಕೊಡುಗೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಕಾಗೇರಿ, ಸ್ವಾತಂತ್ರ್ಯ ಹೋರಾಟ ಹಾಗೂ ಸಂವಿಧಾನ ರಚನೆ ಪ್ರತ್ಯೇಕವಾಗಿಸಿ ಸಂವಿಧಾನ ಕುರಿತು ಹೆಚ್ಚು ಉಲ್ಲೇಖ ಮಾಡಲಾಗಿದೆಯೇ ಹೊರತು ಪ್ರಾಮುಖ್ಯತೆ ಇಲ್ಲ ಎಂಬ ಕಾರಣಕ್ಕೆ ಉಲ್ಲೇಖೀಸಿಲ್ಲ ಎಂದುಕೊಳ್ಳಬಾರದು ಎಂದು ತಿಳಿಸಿದರು. ಮತ್ತೆ ಮಾತು ಮುಂದುವರಿಸಿದ ಎಚ್‌.ಕೆ.ಪಾಟೀಲ್‌, ಬಿ.ಎನ್‌.ರಾವ್‌ ಬಗ್ಗೆ ಅಪಾರ ಗೌರ ವವಿದೆ. ಆದರೆ, ಅವರೇ ಸಂವಿಧಾನದ ಮೂಲ ಕರಡು ಪ್ರತಿ ಸಿದ್ಧಪಡಿಸಿದರು ಎಂದು ಉಲ್ಲೇಖೀಸಿರುವುದು ಸರಿಯಲ್ಲ ಎಂದು ಆಕ್ಷೇಪ ತೆಗೆದರು.

Advertisement

ಅಂಬೇಡ್ಕರ್‌ಗೆ ಗೌರವ ಸಲ್ಲಬೇಕು: ಆಗ ಮಧ್ಯ ಪ್ರವೇಶಿಸಿದ ಸಿಎಂ, ಅಂಬೇಡ್ಕರ್‌ ಬಗ್ಗೆ ನಮಗೆ ವಿಶೇಷ ಗೌರವವಿದೆ. 7 ಮಂದಿ ಸದಸ್ಯರಿ ದ್ದರೂ ಅಂಬೇಡ್ಕರ್‌ ಒಬ್ಬರೇ ಕರಡು ಪೂರ್ತಿ ಮಾಡಿ ಸಂವಿಧಾನಕ್ಕೆ ದಾರಿ ತೋರಿದವರು ಎಂದು ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಬಳಿಕ ಸ್ಪಷ್ಟನೆ ನೀಡಿದ ಕಾಗೇರಿ, ಎಚ್‌.ಕೆ.ಪಾಟೀಲ್‌ ಅವರು ಪ್ರಸ್ತಾಪಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ನನ್ನ ಪ್ರಾಸ್ತಾವಿಕ ನುಡಿಗಳಲ್ಲಿ ಎಂ.ಎನ್‌.ರಾವ್‌ ಅವರ ಪಾತ್ರದ ಬಗೆಗಿನ ಮಾಹಿತಿ ಕುರಿತಂತೆ ಕೆಲ ತಿದ್ದುಪಡಿ ಮಾಡಿ, ಪರಿಷ್ಕೃತ ಮಾಹಿತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next