Advertisement

ಏಕಕಾಲದಲ್ಲಿ ಚುನಾವಣೆ ನಡೆಸಲು ಸಂವಿಧಾನ ತಿದ್ದುಪಡಿ ಅಗತ್ಯ

12:04 PM May 10, 2017 | Team Udayavani |

ಬೆಂಗಳೂರು: ದೇಶಾದ್ಯಂತ ಪ್ರತಿ ಐದು ವರ್ಷಕ್ಕೊಮ್ಮೆ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಪೂರಕವಾಗುವಂತೆ ಸಂವಿಧಾನ ತಿದ್ದುಪಡಿಯಾಗಬೇಕು ಎಂದು ನಿವೃತ್ತ ರಾಜ್ಯಪಾಲ ನ್ಯಾ.ಎಂ.ರಾಮಾ ಜೋಯಿಸ್‌ ಅಭಿಪ್ರಾಯಪಟಿದ್ದಾರೆ. 

Advertisement

ಯುರೇಕಾ ಪಬ್ಲಿಕೇಷನ್‌ ಹೊರತಂದಿರುವ ಹಿರಿಯ ಪತ್ರಕರ್ತ ಸಿ.ಟಿ.ಜೋಷಿ ಅವರ “ಸುದ್ದಿಗಾಗಿ ಸ್ವಾಭಿಮಾನ ಬಲಿ?’ ಪುಸ್ತಕವನ್ನು ಭಾರತೀಯ ವಿದ್ಯಾಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, “ದೇಶಾದ್ಯಂತ ಏಕಕಾಲದಲ್ಲೇ ಚುನಾವಣೆಗಳು ನಡೆಯಬೇಕು. ಎಲ್ಲಾ ಭಾಗದ ಜನರಿಗೆ ಅನುಕೂಲವಾಗುವಂತೆ ಐದು ವರ್ಷಕ್ಕೊಮ್ಮೆ ಒಟ್ಟಾಗಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಚುನಾವಣಾ ದುಂದುವೆಚ್ಚ  ತಡೆಯಲು ಸಾಧ್ಯವಿದೆ,’ ಎಂದರು.

“ಚುನಾವಣಾ ವ್ಯವಸ್ಥೆ ಸುಧಾರಣೆಯ ಜತೆಗೆ ಶಿಕ್ಷಣದ ಆಧಾರದಲ್ಲಿ ಚುನಾವಣೆ ನಡೆಯುವಂತಾಗಬೇಕು. ಸದ್ಯ ಚಿಹ್ನೆ ನೋಡಿ ಮತ ಹಾಕುವವರೇ ಅನೇಕರಿದ್ದಾರೆ. ಇದರ ಬದಲಿಗೆ ಜನರು ಶಿಕ್ಷಿತರಾಗಿ, ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಓದಿ ವೋಟ್‌ ಹಾಕುವ ವ್ಯವಸ್ಥೆ ಬರಬೇಕು,’ ಎಂದರು.

“ಜಾತಿ ಪದ್ಧತಿ ಈ ದೇಶದ ಬಹುದೊಡ್ಡ ರೋಗ. ಚುನಾವಣೆ ಮೇಲೂ ಪ್ರಭಾವ ಬೀರುತ್ತಿದೆ. ಸಂವಿಧಾನದ ನೆಲೆಯಲ್ಲಿ ಚುನಾವಣೆ ಹಾಗೂ ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ. ಇದು ದೇಶದ ಅಭಿವೃದ್ಧಿಗೆ ಮಾರಕ. ಚುನಾವಣಾ ವ್ಯವಸ್ಥೆಯ ಸುಧಾರಣೆಯ ಜತೆಗೆ ರಾಜಕೀಯ ಪಕಗಳು ಅಭ್ಯರ್ಥಿಗಳ ಆಯ್ಕೆಯ ಮಾನದಂಡದಲ್ಲೂ ಸುಧಾರಣೆ ತರುವ ಅಗತ್ಯವಿದೆ,’ ಎಂದು ಹೇಳಿದರು.

ಪತ್ರಕರ್ತ ಸದಾ ಕ್ರಿಯಾಶೀಲನಾಗಿ ತನಿಖಾ ವರದಿಗಳನ್ನು ಮಾಡುತ್ತಿರಬೇಕು. ಆದರೆ, ಯಾವುದೇ ವಿಚಾರದಲ್ಲೂ ನ್ಯಾಯಾಧೀಶನಂತೆ ವರ್ತಿಸುವುದು ಅಥವಾ ನ್ಯಾಯತೀರ್ಮಾನ ಮಾಡುವುದು ಸರಿಯಲ್ಲ. ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸುದ್ದಿಗಳ ಪ್ರಸರ ಕಡಿಮೆ ಮಾಡಬೇಕು ಎಂಬ ಸಲಹೆ ನೀಡಿದರು.

Advertisement

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಕೆ.ರವಿ ಮಾತನಾಡಿ, “ಭಾರತೀಯ ಮಾಧ್ಯಮಗಳಿಂದು ನಾಗಲೋಟದಲ್ಲಿ ಸಾಗುತ್ತಿವೆಯಾದರೂ  ಸಾಮಾಜಿಕ ಹೊಣೆಗಾರಿಕೆ ಹಾಗೂ ಮೌಲ್ಯ ಕಾಪಾಡುವಲ್ಲಿ ಎಡವುತ್ತಿವೆ. ಬಹಳ ವರ್ಷಗಳ ಹಿಂದೆ ತಂತ್ರಜ್ಞಾನ ಇರಲಿಲ್ಲ. ಆಗ ಪತ್ರಿಕಾ ಧರ್ಮ ಚೆನ್ನಾಗಿತ್ತು. ಇವತ್ತು ಸಮಾಜ ಪತ್ರಿಕೋದ್ಯಮವನ್ನೇ ಪ್ರಶ್ನೆ ಮಾಡುವ ಸ್ಥಿತಿಗೆ ತಲುಪಿಸಿದೆ,’ ಎಂದರು.

ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌, ಪತ್ರಕರ್ತರಾದ ಸಿ.ಎಂ.ರಾಮಚಂದ್ರ, ಸಿ.ಟಿ.ಜೋಷಿ, ಪ್ರಕಾಶಕ ಜಿ.ಗೌತಮ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next