ಕನಕಗಿರಿ: ಕರ್ನಾಟಕ ಸರ್ಕಾರದ ಆದೇಶದಂತೆ ರಾಜ್ಯಾದ್ಯಂತ ಏಕಕಾಲಕ್ಕೆ ಸಂವಿಧಾನ ಓದು ಪೀಠಿಕೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದು ಇಲ್ಲಿನ ವಿವಿಧ ಇಲಾಖೆಗಳು ಬೇಜಾವಬ್ದಾರಿಯಿಂದ ಸುಖಾ ಸುಮ್ಮನೆ ಆಚರಿಸುವ ಮೂಲಕ ಅಪಮಾನ ಎಸಗಿದ್ದಾರೆ.
ಪಟ್ಟಣದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಂವಿಧಾನ ಓದು ಪೀಠಿಕೆ ಕಾರ್ಯಕ್ರಮಕ್ಕೆ ಸಭಾಂಗಣದ ವೇದಿಕೆಯ ಹಿಂಬಾಗ ಬಿದಿರಿನ ಕೋಲು ಉಪಯೋಗಿಸಿ ಬ್ಯಾನರ್ ಅಳವಡಿಸಿ ಸಮಯಕ್ಕೆ ಸರಿಯಾಗಿ ಪ್ರಾರಂಭಿಸದೆ ಅವಮಾನ ಎಸಗಿದ್ದಾರೆ.
ತರಾಟೆಗೆ: ಈ ಕಾರ್ಯಕ್ರಮ ರಾಜ್ಯದ ಪ್ರಮುಖ ಕಾರ್ಯಕ್ರಮವಾಗಿದೆ. ಇಲ್ಲಿನ ವಿವಿಧ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಂವಿಧಾನಕ್ಕೆ ಅವಮಾನ ಮಾಡಲಾಗುತ್ತಿದೆ. ಪಟ್ಟಣದ ಯಾವ ಒಂದು ಸಂಘಟನೆಗಳಿಗೆ ಆಹ್ವಾನಿಸದೆ ತಮಗೆ ತಿಳಿದಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದಲಿತ ಮುಖಂಡ ಪಾಮಣ್ಣ ಅರಳಿಗನೂರು ತಹಶೀಲ್ದಾರ ವಿಶ್ಬನಾಥ ಮುರುಡಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಅದಲ್ಲದೆ ಬೆಳಗ್ಗೆ 10 ಗಂಟೆಗೆ ಏಕಕಾಲಕ್ಕೆ ಆಯೋಜಿಸಬೇಕಾದ ಕಾರ್ಯಕ್ರಮ 10.40 ಗಂಟೆಯಾದರೂ ಪ್ರಾರಂಭವಾಗದಿರುವುದು ಖಂಡನೀಯ ಎಂದು ಹೇಳಿದರು.
ಸ್ಥಳಾಂತರ: ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ವಿವಿಧ ತರಹದ ಕುರ್ಚಿಗಳನ್ನಿಟ್ಟು ಸರಿಯಾದ ಶಾಮಿಯಾನ ವ್ಯವಸ್ಥೆ ಮಾಡದಿರುವುದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಮುಂಬಾಗದ ಸಭಾಂಗಣದಲ್ಲಿ ಆಯೋಜಿಸುವ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ, ತಾಪ ಇಒ, ಪ.ಪಂ ಮುಖ್ಯಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿಗಳು ಹಾಜರಿದ್ದರೂ ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ದಲಿತ ಮುಖಂಡ ಪಾಮಣ್ಣ ಅರಳಿಗನೂರು, ಶಾಂತಪ್ಲ ಬಸರಿಗಿಡ, ಪ.ಪಂ. ಸದಸ್ಯ ಶೇಷಪ್ಪ ಪೂಜಾರ, ಬೇಸರ ವ್ಯಕ್ತ ಪಡಿಸಿದ್ದಾರೆ.