ಕಾರವಾರ: ಜನರ ಭವಿಷ್ಯ ನಿರ್ಧರಿಸುವ ಚುನಾವಣೆ ಇದಾಗಿದೆ. ಭ್ರಷ್ಟಾಚಾರ ನಿಗ್ರಹ ಚುನಾವಣೆಯ ವಿಷಯವಾಗಿದೆ ಎಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಕಾರವಾರದ ಮಿತ್ರ ಸಮಾಜ ಮೈದಾನದಲ್ಲಿ ಸೋಮವಾರ ಸಂಜೆ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಜಾತಿವಾದದಲ್ಲಿ, ಮತೀಯವಾದದಲ್ಲಿ ನಂಬಿಕೆ ಇಟ್ಟಿಲ್ಲ. ನಾವು ಸಂವಿಧಾನ ಬದಲಿಸುವುದಿಲ್ಲ ಎಂದರು.
ಮನುಷ್ಯ ಜಾತಿಯಿಂದ, ಧರ್ಮದಿಂದ ದೊಡ್ಡವನಾಗುವುದಿಲ್ಲ. ಗುಣದಿಂದ ವ್ಯಕ್ತಿ ದೊಡ್ಡವನಾಗುತ್ತಾನೆ, ಅಭಿವೃದ್ಧಿ ರಾಜಕಾರಣದಲ್ಲಿ ಕೇಂದ್ರ ಸರ್ಕಾರ ನಂಬಿಕೆ ಇಟ್ಟಿದೆ. ಜಾತೀಯತೆ ಮತ್ತು ಅಸ್ಪೃಶ್ಯತೆ ಎರಡೂ ತಪ್ಪು. ಎಲ್ಲರಿಗೂ ನ್ಯಾಯ ಮತ್ತು ಸಮಾನ ಅವಕಾಶಗಳು ಸಿಗಬೇಕು. ಎಲ್ಲ ಧರ್ಮಗಳಲ್ಲಿನ ಜನರಲ್ಲಿ ಹಸಿವು ಇದೆ. ಇದನ್ನು ಹೋಗಲಾಡಿಸಲು ಕೇಂದ್ರ ಸಬ್‌ಕಾ ಸಾಥ್ ಸಬಕಾ ವಿಕಾಸ್ ತತ್ವದಲ್ಲಿ ನಂಬಿಕೆ ಇಟ್ಟಿದೆ ಎಂದು ಪ್ರತಿಪಾದಿಸಿದರು. ರಾಜ್ಯ ಸರ್ಕಾರ ಭ್ರಷ್ಟವಾಗಿದೆ: ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದೆ. ಹಾಗಾಗಿ ಅದನ್ನು ಬದಲಿಸಬೇಕಿದೆ ಎಂದ ಸಚಿವ ನಿತಿನ್ ಗಡ್ಕರಿ ನೆಹರೂ ಕುಟುಂಬದ ವಿರುದ್ಧ ವಾಗ್ಧಾಳಿ ನಡೆಸಿದರು. ನೆಹರೂ ಕಾಲದಿಂದ ದೇಶದ ಬಡತನ, ಹಸಿವು ನಿವಾರಣೆಯ ಘೋಷಣೆಯನ್ನು ಮಾಡುತ್ತಾ ಬರಲಾಯಿತು. ಆದರೆ ಇಂದಿರಾ ಗಾಂಧಿ ಹಸಿವು ಮುಕ್ತ ಭಾರತವನ್ನು ರೂಪಿಸಲಿಲ್ಲ
ಎಂದರು .
ನಾನು ಸುಳ್ಳು ಮಾತಾಡುವುದಿಲ್ಲ: ನಾನು ಸುಳ್ಳು ಮಾತಾಡುವುದಿಲ್ಲ. ನನಗೆ ಅಭಿವೃದ್ಧಿಯಲ್ಲಿ ನಂಬಿಕೆ ಇದೆ. ದಿನ ನಿತ್ಯ ದೇಶದಲ್ಲಿ 18 ಕಿ.ಮೀ. ಉದ್ದದ ರಸ್ತೆ ನಿರ್ಮಾಣವಾಗುತ್ತಿದೆ. ಬೃಹತ್ ಸೇತುವೆಗಳು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿವೆ. ದೆಹಲಿ ಮುಂಬಯಿ ನಡುವೆ ಹೆದ್ದಾರಿ ಕಾಮಗಾರಿ ನಡೆದಿದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಹೆದ್ದಾರಿ ಕಾಮಗಾರಿ ಅಗಲೀಕರಣ ಸದ್ಯ ಪ್ರಾರಂಭವಾಗಲಿದೆ ಎಂದರು.
ಬೇಲೇಕೇರಿ ಬಂದರು ಅಭಿವೃದ್ಧಿ: ಬೇಲೇಕೇರಿ ವಾಣಿಜ್ಯ ಬಂದರು ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ ಈ ಸಂಬಂಧ ಪತ್ರ ಬರೆದು, ಮಾತುಕತೆ ಸಹ ಆಡಿದ್ದೇನೆ. ಆದರೆ ಸರ್ಕಾರದಲ್ಲಿ ಇರುವವರು ಕ್ರಿಯಾಶೀಲರಾಗಿರಬೇಕು. ಅಭಿವೃದ್ಧಿಗೆ ಆಸಕ್ತಿ ತೋರಬೇಕು. ಮೀನುಗಾರರಿಗೆ ತೊಂದರೆಯಾಗದಂತೆ ಬಂದರು ಅಭಿವೃದ್ಧಿ ಮಾಡುತ್ತೇವೆ. ಕಾರವಾರ ಬಂದರು ಅಭಿವೃದ್ಧಿಗೆ 2000 ಕೋಟಿ ಹಣವನ್ನು ಸಾಗರ ಮಾಲಾ ಯೋಜನೆಯಲ್ಲಿ ಮೀಸಲಿಟ್ಟಿದ್ದೇವೆ. ನಮ್ಮದೇ ಸರ್ಕಾರ ಬಂದರೆ ಈ ಯೋಜನೆಗಳಿಗೆ ಚಾಲನೆ ಸಿಗಲಿದೆ. ಜಲ ಸಾರಿಗೆ ಮೂಲಕ ಕಾರವಾರ ಗೋವಾ ಮಧ್ಯೆ ಜಲ ಮತ್ತು ಭೂಮಿ ಮೇಲೆ ಸಂಚರಿಸುವ ಬಸ್ ಓಡಾಡಲಿದೆ ಎಂದರು.
ನದಿಗಳ ಜೋಡಣೆ
ಗಂಗಾ -ಕಾವೇರಿ, ಗೋದಾವರಿ -ಕೃಷ್ಣ ನದಿಗಳ ಜೋಡಣೆ ಸಿದ್ಧ. ಇದಕ್ಕಾಗಿ 8 ಲಕ್ಷ ಕೋಟಿ ರೂ.ಗಳ ಯೋಜನೆ ಸಿದ್ಧವಿದೆ. ಈ ನದಿಗಳ ಜೋಡಣೆಯಾದರೆ ನೀರಾವರಿಗೆ ಮತ್ತು ಕುಡಿವ ನೀರಿನ ಬವಣೆ ನೀಗಲಿದೆ ಎಂದು ನಿತಿನ್ ಗಡ್ಕರಿ ಅಭಿಪ್ರಾಯಪಟ್ಟರು.
ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ, ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ. ರವಿ ಹೆಗಡೆ ಹೂವಿನಮನೆ, ಬಿಜೆಪಿ
ಜಿಲ್ಲಾ ವಕ್ತಾರ ರಾಜೇಶ್ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್, ಉಳ್ವೆಕರ್, ಮನೋಜ್
ಭಟ್ಟ,ಭಾಸ್ಕರ್ ನಾರ್ವೇಕರ್ ಇದ್ದರು.