ಹರಿಹರ: ಸಂವಿಧಾನದ ಪರಿಪಾಲನೆ ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾ ಧೀಶರಾದ ಯಶವಂತ್ ಕುಮಾರ್ ಆರ್. ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಮರಿಯಾ ನಿವಾಸ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಸಂದರ್ಭದಲ್ಲಿ ಸಂವಿಧಾನದ ಆಶೋತ್ತರಗಳಿಗೆ ಧಕ್ಕೆ ಬಾರದಂತೆ ನಾವೆಲ್ಲಾ ಜಾಗೃತಿ ವಹಿಸಬೇಕಿದೆ ಎಂದರು.
ನಮ್ಮಲ್ಲೆರ ಹಕ್ಕುಗಳ ಮೂಲ ಸಂವಿಧಾನ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ ಮಾತ್ರವಲ್ಲದೆ ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ನಾವು ಸಂವಿಧಾನದ ಮೂಲಕ ಪಡೆದಿದ್ದೇವೆ. ಆದ್ದರಿಂದ ಸಂವಿಧಾನವನ್ನು ಓದಿಕೊಂಡು ಅದರಂತೆ ನಡೆದುಕೊಳ್ಳುವ ಮೂಲಕ ದೇಶದ ಘನತೆ, ಗೌರವ ಹೆಚ್ಚಿಸುವುದು ಎಲ್ಲರ ಜವಾಬ್ದಾರಿ ಎಂದರು.
ಎಪಿಪಿ ಪ್ರವೀಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲೆ ದೇಶಾಭಿಮಾನ ಬೆಳೆಸುವಂತ ಚಟುವಟಿಕೆ, ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. ವಕೀಲರಾದ ಶುಭಾ ಇವರು ಮಾತನಾಡಿ, ಸಂವಿಧಾನದ ಕರಡು ಸಮಿತಿಯ ಅಪಾರ ಪರಿಶ್ರಮದಿಂದ ರಚನೆಯಾಗಿದೆ. ಇದಕ್ಕೆ ಪೂರಕವಾಗಿ ಪ್ರತಿಯೊಬ್ಬರೂ ಸೌಹಾರ್ದತೆಯಿಂದ ಜೀವಿಸಲು ಕಲಿಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ ಮಾತನಾಡಿ, ವಿದ್ಯಾರ್ಥಿ ಬದುಕು ಜೀವನ ಕಲೆ ಕಲಿಯುವಂತಹ ವಯಸ್ಸು, ಈ ಹಂತದಲ್ಲಿ ನಾವು ಏನನ್ನು ಕಲಿಯುತ್ತೇವೆಯೋ ಅವುಗಳೇ ಮುಂದಿನ ಜೀವನಕ್ಕೆ ಮಾರ್ಗದರ್ಶನವಾಗುತ್ತದೆ ಎಂದರು.
ಮರಿಯಾ ನಿವಾಸ ಶಾಲೆಯ ವ್ಯವಸ್ಥಾಪಕ ಫಾದರ್ ಡಾ|ಅಂತೋನಿ ಪೀಟರ್ ಮಾತನಾಡಿ, ಮಕ್ಕಳ ಪಾಠ, ಪ್ರವಚನಗಳ ಜೊತೆಯಲ್ಲಿ ಭಾರತದ ಸಂವಿಧಾನದ ಪರಿಚಯ ಮಾಡಿಕೊಡುವ ಇಂತಹ ಕಾರ್ಯಕ್ರಮ ಮಕ್ಕಳಿಗೆ ಪ್ರಯೋಜನಕಾರಿ ಎಂದರು.
ವಕೀಲರ ಸಂಘದ ಅಧ್ಯಕ್ಷ ರುದ್ರಗೌಡ ಪಿ.ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ರಾಜಶೇಖರ್ ಸಂವಿಧಾನದ ಪೀಠಿಕೆ ಬೋ ಧಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಎಲಿಜಬೆತ್ ಜಯಮೇರಿ, ಸಿಸ್ಟರ್ ಪ್ರೀತಿ, ಶಿಕ್ಷಕರಾದ ನಂದಕುಮಾರಿ, ವರ್ಜಿನಿಯಾ ಮೇರಿ, ಥಾಮಸ್, ಡಾ|ಫ್ರಾನ್ಸಿಸ್ ಇತರರಿದ್ದರು.