ಮೊಳಕಾಲ್ಮೂರು: ಸಂವಿಧಾನ ಭಾರತದ ಪವಿತ್ರ ಗ್ರಂಥವಾಗಿದೆ ಎಂದು ಸಮಾಜವಿಜ್ಞಾನ ಶಿಕ್ಷಕಿ ಜಿ.ಎಸ್. ಶೋಭಾ ಹೇಳಿದರು.
ಪಟ್ಟಣದ ಗಾಯತ್ರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಎಲ್ಲಾ ರಾಜ್ಯಗಳಿಗೂ ಆಡಳಿತದ ಕಾನೂನು ನಿಯಮಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ. ಇದು ದೇಶದ ಆಡಳಿತಕ್ಕೆ ತುಂಬಾ ಸಹಕಾರಿಯಾಗಿದೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ದೇಶ ಉತ್ತಮ ಸಾಧನೆ ಮಾಡಿದೆ. ಸಂವಿಧಾನವು ದೇಶಕ್ಕೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ನೀಡಿ ಸರ್ವ ಸಮುದಾಯಗಳ ಏಳಿಗೆ ಮತ್ತು ಸಮಾನತೆಗೆ ಆದ್ಯತೆ ನೀಡಿದೆ. ಬೇರೆ ದೇಶಗಳ ಸಂವಿಧಾನಕ್ಕಿಂತಲೂ ಹೆಚ್ಚಿನ ವಿಧಿಗಳನ್ನು ಹೊಂದಿ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ| ಬಿ.ಆರ್. ಅಂಬೇಡ್ಕರ್‌ರವರು ದೇಶದ ದೀನ ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಸೇರಿದಂತೆ ಸರ್ವ ಸಮುದಾಯದವರಿಗೂ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿ ದೇಶದ ಶ್ರೇಯೋಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ ಎಂದು ಸ್ಮರಿಸಿದರು. ಪ್ರತಿಯೊಬ್ಬ ಭಾರತೀಯರೂ ಸಂವಿಧಾನವನ್ನು ಗೌರವಿಸಿ ಸಂವಿಧಾನದ ಆಶಯಗಳನ್ನು ಈಡೇರಿಸುವ ಕರ್ತವ್ಯ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ. ಓಬಣ್ಣ, ಶಾಲೆಯ ಮುಖ್ಯೋಪಾಧ್ಯಾಯ ಮಂಜು ನಾಯ್ಕ, ಶಿಕ್ಷಕರಾದ ಎ.ಎಸ್. ಜಾನಕಿರಾಮ್, ಕೆ.ಎಸ್. ಪ್ರದೀಪ್ ಕುಮಾರ್, ಜಿ. ಮಹಾದೇವಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.