Advertisement

ಎಸ್‌ಸಿ/ಎಸ್ಟಿ ಮೀಸಲಿಗೆ ಕೆನೆಪದರ ನೀತಿ ಲಗ್ಗೆ?

06:00 AM Nov 16, 2017 | Team Udayavani |

ನವದೆಹಲಿ: ಕರ್ನಾಟಕದಲ್ಲಿ ಬಡ್ತಿ ಮೀಸಲಾತಿ ವಿವಾದ ತಿರುವು ಪಡೆದುಕೊಳ್ಳುತ್ತಿರುವಂತೆಯೇ, ಮೀಸಲಾತಿಯಲ್ಲಿನ “ಕೆನೆಪದರ’ ನೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುತ್ತದೆಯೇ, ಇಲ್ಲವೇ ಎಂಬ ಕುರಿತಂತೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಒಪ್ಪಿದೆ.

Advertisement

ಈ ಸಂಬಂಧ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ರಚಿಸಲು ತೀರ್ಮಾನಿಸಲಾಗಿದ್ದು, ಈ ಪೀಠವು 2006ರ ಎಂ. ನಾಗರಾಜು ಪ್ರಕರಣದ ತೀರ್ಪಿನ ಬಗ್ಗೆ ಮರು ಪರಿಶೀಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸಲಿದೆ. ಆದರೆ 2006ರ ತೀರ್ಪನ್ನು ಸರಿಪಡಿಸಲು ಹೋಗುವುದಿಲ್ಲ ಎಂದೂ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಸ್ಪಷ್ಟಪಡಿಸಿದೆ.

ಅಲ್ಲದೆ, ಈ ವೇಳೆಯೇ ಕರ್ನಾಟಕದ ಬಡ್ತಿಯಲ್ಲಿ ಮೀಸಲಾತಿ ವಿವಾದವೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಎಲ್ಲ ಸಾಧ್ಯತೆಗಳಿವೆ. ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ 2006ರಲ್ಲೇ ಕೆನೆಪದರ ನೀತಿ ಏನಿದ್ದರೂ ಇತರೆ ಹಿಂದುಳಿದ ವರ್ಗ(ಒಬಿಸಿ)ಕ್ಕೆ ಅನ್ವಯವಾಗುತ್ತದೆಯೇ ವಿನಃ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅನ್ವಯವಾಗುವುದಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿತ್ತು. ಆದರೆ, ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ಸಂಬಂಧ ಇದುವರೆಗೂ ಹಲವಾರು ರಾಜ್ಯಗಳು ಸಂವಿಧಾನದ ಅವಕಾಶಗಳನ್ನೇ ತಪ್ಪಾಗಿ ಅರ್ಥೈಸಿಕೊಂಡು ನಿಯಮ ಮೀರುತ್ತಿವೆ. ಹೀಗಾಗಿ ಈ ಸಂಬಂಧ ಕೂಲಂಕಶ ವಿಚಾರಣೆ ನಡೆಸುವಂತೆ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಈ ವರ್ಷಾರಂಭದಲ್ಲಿ ಕರ್ನಾಟಕದಲ್ಲಿನ ಬಡ್ತಿಯಲ್ಲಿನ ಮೀಸಲಾತಿ ಅವಕಾಶ ರದ್ದು ಮಾಡಿದ್ದ ಸುಪ್ರೀಂಕೋರ್ಟ್‌, ಈ ತೀರ್ಪು ನೀಡುವ ಮುನ್ನ ಎಂ. ನಾಗರಾಜು ಪ್ರಕರಣವನ್ನೇ ಮುಂದಿಟ್ಟುಕೊಂಡಿತ್ತು. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ರೂಪಿಸಿದ್ದ ಮಾನದಂಡಗಳನ್ನು ಕರ್ನಾಟಕ ಸರಿಯಾಗಿ ಪಾಲಿಸಿರಲಿಲ್ಲ. ಅಲ್ಲದೆ ಇತರೆ ಹಿಂದುಳಿದ ವರ್ಗಗಳ ಸಮುದಾಯದವರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವೇಳೆ ಕೆಲವೊಂದು ಅಂಶಗಳನ್ನು ಪಾಲನೆ ಮಾಡಬೇಕಿತ್ತು. ಈ ಯಾವ ಮಾನದಂಡಗಳನ್ನೂ ಪಾಲಿಸಿಲ್ಲ ಎಂದು ಸುಪ್ರೀಂಕೋರ್ಟ್‌ ಕರ್ನಾಟಕದ ಬಡ್ತಿಯಲ್ಲಿ ಮೀಸಲು ಅವಕಾಶವನ್ನೇ ರದ್ದು ಮಾಡಿ, ಈಗಾಗಲೇ ಬಡ್ತಿ ಪಡೆದಿರುವವರಿಗೆ ಹಿಂಬಡ್ತಿ ನೀಡುವಂತೆ ಸೂಚಿಸಿತ್ತು.

ಈಗ್ಯಾಕೆ ಚರ್ಚೆ?
ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಕುರಿಯನ್‌ ಜೋಸೆಫ್ ಮತ್ತು ನ್ಯಾ. ಆರ್‌. ಭಾನುಮತಿ ಅವರಿದ್ದ ಪೀಠ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು. ಇದಕ್ಕೆ ಕಾರಣ, ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವಾಗ ಕೆಲವೊಂದು ಬದಲಾವಣೆ ಮಾಡಿಕೊಂಡಿತ್ತು. ಹೀಗಾಗಿ ಈ ಪ್ರಕರಣವು ಮೀಸಲಾತಿಯಲ್ಲಿನ ಕೆನೆಪದರ ಸೂತ್ರಕ್ಕೆ ಸಂಬಂಧಿಸಿರುವುದರಿಂದ ಸಂವಿಧಾನ ಪೀಠವೇ ವಿಚಾರಣೆ ನಡೆಸಬೇಕು ಎಂದಿತ್ತು.

Advertisement

ಅಲ್ಲದೇ ಈ ಪೀಠ ಸಂವಿಧಾನದ ಪರಿಚ್ಛೇದ 341 ಮತ್ತು 342ರ ಸಂಬಂಧ ಕೆಲವೊಂದು ವಿವರಣೆಯನ್ನೂ ಬಯಸಿದೆ. ಅಂದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿನ ಒಂದೇ ಜಾತಿ, ಸಮುದಾಯ, ಗುಂಪು ಅಥವಾ ವಿಭಾಗಗಳಲ್ಲಿ ಸ್ಪರ್ಧೆ ನಡೆಸುವ ಸಲುವಾಗಿ ಕೆನೆಪದರ ಸೂತ್ರ ಅನುಸರಿಸಬೇಕೇ ಅಥವಾ ಬೇಡವೇ ಎಂಬ ವಿವರಣೆ ಕೇಳಿದೆ. ಏಕೆಂದರೆ, ಸಂವಿಧಾನದ ಪರಿಚ್ಛೇದ 16(4), 16(4ಎ) ಮತ್ತು 16(4ಬಿ)ನ ಪ್ರಕಾರ, ಯಾವುದೇ ಹಿಂದುಳಿದ ವರ್ಗಗಳ ವ್ಯಕ್ತಿಗೆ ಮತ್ತು ಆತನ ಸಮುದಾಯ ಯಾವುದೇ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಪಡೆಯದೇ ಇದ್ದರೆ ಅವನಿಗೆ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೇ ಕೊಡಲಾಗಿದೆ.

ಆದರೆ ಎಂ. ನಾಗರಾಜ ಪ್ರಕರಣದಲ್ಲಿ ಮೀಸಲಾತಿಯ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚು ಮೀರಬಾರದು ಎಂದು ಹೇಳಿದೆ. ಜತೆಗೆ ಎಸ್‌ಸಿ/ಎಸ್ಟಿ ಸಮುದಾಯದವರಿಗೆ ಹುದ್ದೆಯಲ್ಲಿ ಬಡ್ತಿ ನೀಡುವ ಯಾವುದೇ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲವೆಂದೂ ಇದೇ ತೀರ್ಪಿನಲ್ಲಿ ಹೇಳಲಾಗಿದೆ. ಆದರೂ, ಕೆಳ ಸಮುದಾಯದವರಿಗೆ ಮೀಸಲಾತಿ ನೀಡುವಾಗ ಅವರ ಪ್ರಾತಿನಿಧ್ಯವನ್ನು ಪರಿಗಣಿಸಿ ರಾಜ್ಯಗಳೇ ಮೀಸಲಾತಿ ನೀಡಬಹುದು ಎಂದು ತೀರ್ಪಿನಲ್ಲಿ ಉಲ್ಲೇಖೀಸಲಾಗಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ರಾಜ್ಯಗಳು ಏನು ಮಾಡಬೇಕು ಎಂಬ ಬಗ್ಗೆ ದ್ವಿಸದಸ್ಯ ಪೀಠ ಸ್ಪಷ್ಟನೆ ಬಯಸಿದೆ.

Advertisement

Udayavani is now on Telegram. Click here to join our channel and stay updated with the latest news.

Next