ಬೆಂಗಳೂರು: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಜೆಡಿಎಸ್ ನಾಯಕರು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಗಳನ್ನೇ ಸಂಪರ್ಕಿಸಿ, ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಆದರೆ, ಕೈ ಟಿಕೆಟ್ ಆಕಾಂಕ್ಷಿಗಳು ಚಿಹ್ನೆ ಬೇಡ, ಕ್ಷೇತ್ರ ಬಿಟ್ಟು ಕೊಡಿ ಎಂದು ಕೇಳುತ್ತಿದ್ದಾರೆ. ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಿದರೆ, ತುಮಕೂರು ಹಾಲಿ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಬೇಕೆನ್ನುವ ಆಲೋಚನೆಯೂ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಕ್ಷೇತ್ರ ಕಳೆದುಕೊಂಡಿರುವ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಜೆಡಿಎಸ್ ಚಿಹ್ನೆ ಬೇಡ, ಕ್ಷೇತ್ರವನ್ನೇ ವಾಪಸ್ ಕೊಡಿ ಎಂದು ಒತ್ತಡ ಹೇರುತ್ತಿದ್ದಾರೆ.
ಇನ್ನು ವಿಜಯಪುರ, ಉತ್ತರ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿಗಳು ಸಿಗದ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದವರನ್ನೇ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಾಜಿ ಸಚಿವ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್ ಅವರನ್ನು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪರ್ಕಿಸಿ ಮನವಿ ಮಾಡಿದ್ದಾರೆ. ಪ್ರಮೋದ್ ಮಧ್ವರಾಜ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಜೆಡಿಎಸ್‌ನಿಂದ ಸ್ಪರ್ಧಿಸಲು ಹಿಂದೇಟು ಹಾಕಿ ಕಾಂಗ್ರೆಸ್ ಚಿಹ್ನೆ ಅಡಿಯಲ್ಲಿ ಚುನಾವಣೆಗೆ ಅವಕಾಶ ನೀಡಿದರೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪಡೆದುಕೊಂಡಿರುವ ಜೆಡಿಎಸ್, ಅಲ್ಲಿಯೂ ಪಕ್ಷದ ಪರವಾಗಿ ಪ್ರಬಲ ಅಭ್ಯರ್ಥಿಯ ಕೊರತೆ ಎದುರಿಸುತ್ತಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ರಾಜು ಅಲಗೂರ್ ಹಾಗೂ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರನ್ನು ಜೆಡಿಎಸ್ ನಾಯಕರು ಸಂಪರ್ಕಿಸಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುವಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅವರೂ ಕಾಂಗ್ರೆಸ್‌ನಿಂದಲೇ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ವಿಜಯಪುರ ಕ್ಷೇತ್ರ ಕಾಂಗ್ರೆಸ್‌ಗೆ ಬಂದಿದ್ದರೆ, ರಾಜು ಅಲಗೂರ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಗೃಹ ಸಚಿವ ಎಂ.ಬಿ. ಪಾಟೀಲ್ ಬಯಸಿದ್ದರು. ಸಿದ್ದರಾಮಯ್ಯ ಅವರು ಭೋವಿ ಸಮಾಜಕ್ಕೆ ಸೇರಿರುವ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದರು. ಜೆಡಿಎಸ್ ನಾಯಕರು ಇಬ್ಬರೂ ಆಕಾಂಕ್ಷಿಗಳನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ದೇಶಪಾಂಡೆ ವಿರೋಧ: ಉತ್ತರ ಕನ್ನಡ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಆನಂದ್ ಅಸ್ನೋಟಿಕರ್ ಅವರನ್ನು ಸ್ಪರ್ಧೆಗಿಳಿಸಿಲು
ವರಿಷ್ಠರು ಮುಂದಾಗಿದ್ದಾರೆ. ಆದರೆ, ಅವರ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿದು ಬಂದಿದೆ.