Advertisement

ಮಧ್ಯರಾತ್ರಿ ನಿರಂತರವಾಗಿ ಬಾಗಿಲು ತಟ್ಟುತ್ತಿದ್ದ!

06:00 AM Aug 28, 2018 | |

ಎರಡು ವರ್ಷದ ಹಿಂದಿನ ಘಟನೆ. ಅತ್ತೆ- ಮಾವ ಶಿರಸಿಗೆ ಹೋಗಿದ್ದರು. ಮನೆಯವರು, ಸಂಜೆ ಆಫೀಸಿಗೆ ಹೋದವರು, ಬೆಳಗ್ಗೆ ಬರುವುದಾಗಿ ಹೇಳಿದ್ದರು. ಮನೆಯಲ್ಲಿ ಇದ್ದಿದ್ದು ನಾನು ಮತ್ತು ಮಗಳು ಮಾತ್ರವೇ.

Advertisement

  ರಾತ್ರಿ ಎರಡು ಗಂಟೆ ಸುಮಾರು. ಯಾರೋ ಬಾಗಿಲು ತಟ್ಟುತ್ತಿರುವ ಸದ್ದು. ಮೊದಲೇ ನನಗೆ ಪುಕ್ಕಲುತನ ಜಾಸ್ತಿ. ಎಲ್ಲ ಬಾಗಿಲುಗಳನ್ನು ಭದ್ರಪಡಿಸಿ, ಅದಕ್ಕೆ ಲಾಕ್‌ ಹಾಕಿಯೇ ಮಲಗುತ್ತೇನೆ. ಮನೆಯವರು ಬರುವ ಮುಂಚೆ ಹೇಗಿದ್ದರೂ, ದೂರವಾಣಿ ಕರೆ ಮಾಡಿಯೇ ಬರುತ್ತಾರೆ. ಆದರೆ, ಈಗ ಬಂದು ಬಾಗಿಲು ತಟ್ಟುತ್ತಿರುವುದು ಯಾರಿರಬಹುದು ಎಂಬ ಕುತೂಹಲ, ಆತಂಕ ಹೆಚ್ಚಾಗುತ್ತಿತ್ತು. ಮನೆಯಲ್ಲಿ ನಾದಿನಿ ಮದುವೆಯ ಖರ್ಚಿಗೆಂದು ತಂದಿಟ್ಟ ಹಣಕಾಸು ಬೇರೆ ಜಾಸ್ತಿಯಿತ್ತು.

  ಬರುಬರುತ್ತಾ ಬಾಗಿಲು ಬಡಿದ ಶಬ್ದ ಹೆಚ್ಚಾಗುತ್ತಲೇ, ನನ್ನ ಎದೆ ಬಡಿತವೂ ಜಾಸ್ತಿಯಾಯಿತು. ಏನು ಮಾಡುವುದೆಂದು ತಿಳಿಯದೇ ಅಕ್ಕಪಕ್ಕದ ಮನೆಯವರೆಲ್ಲರಿಗೂ ಫೋನಾಯಿಸಲು ಶುರುಮಾಡಿದೆ. ಗಾಢ ನಿದ್ರೆಯಲ್ಲಿರುವ ಕಾರಣ ಯಾರೂ ಕರೆಯನ್ನು ಸ್ವೀಕರಿಸದೇ ಇದ್ದಿದ್ದರಿಂದ, ಬಹಳ ಭಯವಾಯಿತು. ಹಾಗೆಯೇ ಫೋನಾಯಿಸುತ್ತ ಕುಳಿತಾಗ, ಸನಿಹದ ಮನೆಯ ಅಜಯ್‌ ಬಾಯಾರಿಕೆಯಾಗಿ ನೀರು ಕುಡಿಯಲು ಎದ್ದವನು, ಮೊಬೈಲ್‌ನ ಮೇಲೆ ಕಣ್ಣುಹಾಯಿಸಿದ. ಆತ ವಾಪಸು ನನಗೆ ಕರೆಮಾಡಿ ಧೈರ್ಯ ಹೇಳಿದ. ತನಗೆ ಗೊತ್ತಿರುವ ಪೊಲೀಸರಿಗೆ ಬರುವುದಾಗಿಯೂ ಹೇಳಿದ.

  ಅಜಯ್‌ ಮತ್ತು ಪೋಲಿಸ್‌ ಬರುವವರೆಗೂ ಬಾಗಿಲು ಬಡಿದ ಶಬ್ದ ಜೋರಾಗಿ ಕೇಳಿಸುತ್ತಲೇ ಇತ್ತು. ಬಂದಿರುವನು ಕಳ್ಳನೇ ಆಗಿರಬೇಕು, ಮನೆಯಲ್ಲಿರುವ ಆಭರಣ, ಹಣದ ಸುಳಿವು ಸಿಕ್ಕಿ ಕಳ್ಳರ ಸಮೂಹವೇ ಬಂದಿರಬಹುದು ಎಂಬ ಅನುಮಾನ ಒಂದು ಕಡೆ. ನನ್ನ ಮತ್ತು ಕಳ್ಳರ ನಡುವೆ 2-3 ಬಾಗಿಲುಗಳ ಕೋಟೆಯಿದ್ದರೂ ಕಳ್ಳರಿಗೆ ಅದನ್ನು ಒಡೆದು ಬರಲು ಹೆಚ್ಚೇನೂ ಕಷ್ಟವಿಲ್ಲ. ಭಯದಲ್ಲಿ ನೂರಾರು ಸಂದೇಹಗಳು ನನ್ನ ತಲೆಯನ್ನು ಹೊಕ್ಕುತ್ತಿದ್ದವು.

  ಪೋಲಿಸರು ಬಂದು ಬಾಗಿಲು ಬಡಿಯುತ್ತಿದ್ದವನನ್ನು ಬಂಧಿಸಿದರು. ಅವನ ವಿಚಾರಣೆ ನಡೆಸಿದಾಗ, ಆತ ಕುಡಿದು ಬಂದಿದ್ದ ಸಂಗತಿ ತಿಳಿಯಿತು. ಆದರೆ, ಕೆಲ ಹೊತ್ತಿನವರೆಗೆ ನನ್ನೊಳಗೆ ಭಯ ಹುಟ್ಟಿಸಿದ ಆ ಅಪರಿಚಿತನನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಅಬ್ಟಾ! ಅಂದು ನಮ್ಮನ್ನು ದೇವರೇ ಕಾಪಾಡಿದ್ದ.

Advertisement

ಸಾವಿತ್ರಿ ಶ್ಯಾನಭಾಗ್‌

Advertisement

Udayavani is now on Telegram. Click here to join our channel and stay updated with the latest news.

Next