Advertisement

ನಿರಂತರ ಮಳೆ: ಮಲೆತ್ತಡ್ಕ ಸೇತುವೆಯ ಒಂದು ಪಾರ್ಶ್ವ ಕುಸಿತ

10:22 PM Sep 19, 2020 | mahesh |

ವಿಟ್ಲ: ಪುಣಚ ಗ್ರಾಮದ ಮಲೆತ್ತಡ್ಕದಲ್ಲಿ ತಡೆಗೋಡೆ ಕುಸಿದಿದ್ದ ಪ್ರಮುಖ ಸೇತುವೆಯ ಒಂದು ಪಾರ್ಶ್ವ ಕುಸಿದು ಬಿದ್ದಿದ್ದು, ಸೇತುವೆ ನೀರುಪಾಲಾಗುವ ಸ್ಥಿತಿ ತಲುಪಿದೆ. ಶುಕ್ರವಾರದಿಂದ ನಿರಂತರವಾಗಿ ಸುರಿಯುವ ಮಳೆಯಿಂದಾಗಿ ಭಾಗಶಃ ಕುಸಿದಿದ್ದ ಸೇತುವೆ ತಡೆಗೋಡೆ ಶನಿವಾರ ಬೆಳಗಿನಿಂದ ನಿರಂತರ ಕುಸಿಯುತ್ತಾ ಸಾಗಿದ್ದು, ಸೇತುವೆಯ ಅಡಿಪಾಯದ ತನಕ ಕುಸಿದಿದೆ. ತಡೆಗೋಡೆಯ ಕಲ್ಲು ಸಮೀಪದ ಅಡಿಕೆ ತೋಟಕ್ಕೆ ರಾಶಿ ಬಿದ್ದಿದೆ. ಅರ್ಧದಷ್ಟು ಡಾಮರು ರಸ್ತೆ ನೀರುಪಾಲಾಗಿದೆ.

Advertisement

ಬ್ಯಾರಿಕೇಡ್‌ ಅಳವಡಿಕೆ
ಪುಣಚ ಗ್ರಾಮದ ಸುಮಾರು 700ಕ್ಕಿಂತಲೂ ಹೆಚ್ಚು ಮನೆಗಳಿಗೆ ಸಂಪರ್ಕ ಒದಗಿಸುವ ಈ ಸೇತುವೆ ಕೇರಳ-ಕರ್ನಾಟಕವನ್ನು ಸಂಪರ್ಕಿಸುತ್ತದೆ. ಕಳೆದ ವರ್ಷದಿಂದಲೇ ರಸ್ತೆ ಸ್ವಲ್ಪಸ್ವಲ್ಪವೇ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಕುಸಿಯಲಾರಂಭಿಸಿದೆ. ಡಾಮರು ರಸ್ತೆ ಮತ್ತು ತಡೆಗೋಡೆಯೂ ಕುಸಿದು ಬಿದ್ದಿದೆ. ಇಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇ ಧಿಸಿ, ಬ್ಯಾರಿಕೇಡ್‌, ಸೂಚನಾಫಲಕಗಳನ್ನು ಅಳವಡಿಸಲಾಗಿತ್ತು. ಶನಿವಾರ ಸೇತುವೆಯೇ ಕುಸಿಯುವ ಭೀತಿ ಇದ್ದ ಕಾರಣ ಎಲ್ಲ ವಾಹನಗಳ ಸಂಚಾರವನ್ನು ನಿಷೇ ಧಿಸಲು ಇಲಾಖೆ ಸೂಚಿಸಿದ್ದು, ವಿಟ್ಲ ಪೊಲೀಸರು ಅಪಾಯಸೂಚಕ ಪಟ್ಟಿ ಕಟ್ಟಿ, ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಸ್ತೆಯನ್ನು ಎರಡೂ ಭಾಗಗಳಿಂದ ಮುಚ್ಚಿದ್ದಾರೆ.

10 ಕಿ. ಮೀ. ಸುತ್ತಿ ಸಾಗಬೇಕು
ಮಳೆ ನಿಲ್ಲದೆ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಮಾಡಲು ಅಸಾಧ್ಯ ಎಂದು ಇಲಾಖೆಯ ಸಹಾಯಕ ಎಂಜಿನಿಯರ್‌ ತಿಳಿಸಿದ್ದಾರೆ. ಈ ಭಾಗದ ಸಂಚಾರ ನಿರ್ಬಂಧಿ ಸಿರುವ ಕಾರಣ ತೋರಣಕಟ್ಟೆ, ಮೂಡಂಬೈಲು ಭಾಗದ ಗ್ರಾಮಸ್ಥರು ಸಾರಡ್ಕ ಮಾರ್ಗವಾಗಿ ಪುಣಚಕ್ಕೆ ಬರಬೇಕಾಗಿದೆ. ತೋರಣಕಟ್ಟೆ ಕಲ್ಲಂಗಳ ಮಾರ್ಗವಾಗಿಯೂ ಬರಬಹುದು. ಆದರೆ ಎರಡೂ ಮಾರ್ಗಗಳಲ್ಲಿ ಬರಲು 10 ಕಿ. ಮೀ.ಗಿಂತಲೂ ಹೆಚ್ಚು ದೂರ ಸುತ್ತಿ ಸಾಗಬೇಕಾಗಿದೆ.

ಉಭಯ ತಾಲೂಕುಗಳಲ್ಲಿ ಉತ್ತಮ ಮಳೆ
ಪುತ್ತೂರು/ಸುಳ್ಯ: ಉಭಯ ತಾಲೂಕುಗಳಲ್ಲಿ ಶನಿವಾರ ದಿನವಿಡೀ ಉತ್ತಮ ಮಳೆಯಾಗಿದೆ. ಮುಂಜಾನೆ ಯಿಂದಲೇ ಮಳೆ ಆರಂಭಗೊಂಡು ಮಧ್ಯಾಹ್ನ ತನಕ ಬಿರುಸಿನಿಂದ ಸುರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇನ್ನೆರಡು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಶನಿವಾರ ಪುತ್ತೂರು ಹಾಗೂ ಸುಳ್ಯ ತಾ|ನ ಪ್ರಮುಖ ಸಂಪರ್ಕ ರಸ್ತೆಗಳ ಇಕ್ಕೆಲಗಳಲ್ಲಿ ಚರಂಡಿ ನೀರು ರಸ್ತೆಯಲ್ಲೇ ಹರಿದಿದೆ. ಕಾಣಿಯೂರು-ಮಂಜೇಶ್ವರ ರಸ್ತೆಯ ನರಿಮೊಗರು ಗ್ರಾ.ಪಂ. ಮುಂಭಾಗದಲ್ಲಿ ರಸ್ತೆಯೇ ತೋಡಾಗಿ ಬದಲಾಗಿತ್ತು. ಸಮೀಪದ ಬಸದಿ ಬಳಿ ರಸ್ತೆಯಲ್ಲಿ ನೀರು ತುಂಬಿತ್ತು. ಉಭಯ ತಾಲೂಕುಗಳ ನದಿ, ಹೊಳೆ, ತೋಡುಗಳಲ್ಲಿ ನೀರಿನ ಹರಿವು ಪ್ರಮಾಣ ಹೆಚ್ಚಾಗಿತ್ತು.

ಬಂಟ್ವಾಳ: ನಿರಂತರ ವರ್ಷಧಾರೆ
ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಶನಿವಾರ ದಿನವಿಡೀ ಮಳೆ ಸುರಿದಿದ್ದು, ತೊಡುಗಳು ತುಂಬಿ ಹರಿಯುವ ಜತೆಗೆ ಬಿ.ಸಿ. ರೋಡ್‌ನ‌ಲ್ಲಿ ಹೆದ್ದಾರಿಯಲ್ಲೂ ನೀರು ತುಂಬಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು. ಕೆಲವು ದಿನಗಳಿಂದ ಮಳೆ ಸುರಿ ಯುತ್ತಿದ್ದು, ಶನಿವಾರ ಮುಂಜಾನೆ ಆರಂಭ ಗೊಂಡ ಮಳೆ ನಿರಂತರವಾಗಿ ರಾತ್ರಿವರೆಗೂ ಮುಂದುವರಿದಿತ್ತು. ಬಿ.ಸಿ. ರೋಡ್‌ನ‌ ಸರ್ವಿಸ್‌ ರಸ್ತೆಯ ಮಂಗಳೂರು ಕಡೆಗೆ ತೆರಳುವ ಬಸ್‌ ನಿಲ್ದಾಣದ ಬಳಿ ಮಳೆಗಾಲದುದ್ದಕ್ಕೂ ನೀರು ನಿಂತು ಸಾರ್ವಜನಿಕರು ತೊಂದರೆ ಅನುಭವಿಸಿದ್ದು, ಶನಿವಾರವೂ ಭಾರೀ ಮಳೆಯ ಪರಿಣಾಮ ಅದೇ ಸ್ಥಿತಿ ಉಂಟಾಗಿತ್ತು. ಜತೆಗೆ ಹೆದ್ದಾರಿ ಹೊಂಡಗಳಲ್ಲೂ ನೀರು ನಿಂತು ವಾಹನ ಸಾವಾರರು ಸಂಕಷ್ಟ ಅನುಭವಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next