ಬೆಂಗಳೂರು: ಕಳೆದು ಹೋಗಿದ್ದ ಶೈಕ್ಷಣಿಕ ಮೂಲ ದಾಖಲೆಗಳನ್ನು ತ್ವರಿತಗತಿಯಲ್ಲಿ ಯುವತಿಯ ಕೈ ಸೇರುವಂತೆ ಮಾಡಿದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ಕಾರ್ಯಕ್ಷಮತೆಯಿಂದಾಗಿ ಕಾಶ್ಮೀರ ಮೂಲದ ಯುವತಿ, ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆಯಲು ನೆರವಾದ ಪ್ರಕರಣ ನಡೆದಿದೆ.
ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಸದಾಶಿವ ಬೆಳಗಲಿ, ತ್ವರಿತ ಕಾರ್ಯತತ್ಪರತೆ ಮೆರೆದವರು. ಅವರ ಕಾರ್ಯದಿಂದ ಉದ್ಯೋಗ ಪಡೆದ ಕಾಶ್ಮೀರದ ಎಂಜಿನಿಯರಿಂಗ್ ಪದವೀಧರೆ ಮರಿಯಾ ಖಾನ್, ಬೆಂಗಳೂರು ಪೊಲೀಸರ ಕಾರ್ಯಕ್ಷಮತೆ, ಕಾನ್ಸ್‌ಟೇಬಲ್ ಸದಾಶಿವ ಅವರ ನೆರವನ್ನು ಶ್ಲಾ ಸಿದ್ದಾರೆ. ಜತೆಗೆ, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಬಹುರಾಷ್ಟ್ರೀಯ ಕಂಪನಿಯಲ್ಲಿ ಜ.7ರಂದು ಸಂದರ್ಶನಕ್ಕೆಂದು ಆಟೋದಲ್ಲಿ ತೆರಳಿದ್ದ ಮರಿಯಾ, ತಮ್ಮ ಶೈಕ್ಷಣಿಕ ಮೂಲ ದಾಖಲೆಗಳನ್ನು ಮರೆತು ಹೋಗಿದ್ದಾರೆ. ದಾಖಲೆಗಳನ್ನು ಗಮನಿಸಿ ಪುನಃ ಅಲ್ಲಿಗೆ ಹೋದ ಚಾಲಕ, ಅವುಗಳನ್ನು ಟೆಕ್‌ಪಾರ್ಕ್ ಬಳಿಯಿದ್ದ ಅಪರಿಚಿತ ಯುವಕನಿಗೆ ನೀಡಿದ್ದಾರೆ. ಆ ಯುವಕ ದಾಖಲೆಗಳನ್ನು ನಾಗವಾರ ಸಿಗ್ನಲ್‌ನಲ್ಲಿ ಕರ್ತವ್ಯದಲ್ಲಿದ್ದ ಸದಾಶಿವ ಅವರಿಗೆ ನೀಡಿದ್ದ.
ದಾಖಲೆಗಳನ್ನು ಠಾಣೆಗೆ ತಂದ ಸದಾಶಿವ, ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಯುವತಿಗೆ ತಲುಪಿಸಲು ಪ್ರಯತ್ನಿಸಿದ್ದಾರೆ. ಆದರೆ, ಮರಿಯಾರ ದೂರವಾಣಿ ಸಂಪರ್ಕ ಸಿಕ್ಕಿಲ್ಲ. ಹೀಗಾಗಿ, ಸದಾಶಿವ ಅವರು ಘಟನೆ ಕುರಿತು ಸಮೀಪದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ ದಾಖಲೆಗಳು ಕಳೆದ ಬಗ್ಗೆ ದೂರು ಬಂದರೆ ಸಂಪರ್ಕಿಸುವಂತೆ ಹೇಳಿದ್ದಾರೆ. ಆದರೆ, ಯಾವುದೇ ದೂರು ದಾಖಲಾಗಿಲ್ಲ.
ಇ-ಲಾಸ್ಟ್‌ನಲ್ಲಿ ದೂರು ದಾಖಲಾದರೆ ಠಾಣೆಯ ಇ-ಮೇಲ್ ವಿಳಾಸಕ್ಕೆ ಮಾಹಿತಿ ಬರಲಿದೆ ಎಂದು ಸದಾಶಿವ ಅವರು ಕಾದರೂ ಪ್ರಯೋಜನವಾಗಿಲ್ಲ. ಇತ್ತ ದಾಖಲೆಗಳು ಕಳೆದಿದ್ದರಿಂದ ಮರಿಯಾ ಕೂಡ ಕಂಗಾಲಾಗಿದ್ದರು. ಜ.8ರಂದು ಭಾರತ್ ಬಂದ್ ಇದ್ದಿದ್ದರಿಂದಾಗಿ ಸದಾಶಿವ ಅವರು ಮುಂಜಾನೆ ಐದು ಗಂಟೆಗೆ ಠಾಣೆಗೆ ಬಂದು, ಇ-ಲಾಸ್ಟ್ ಪರಿಶೀಲನೆ ನಡೆಸಿದಾಗ, ದಾಖಲೆ ಕಳೇದ ಬಗ್ಗೆ ದೂರು ಬಂದಿತ್ತು. ಕೂಡಲೇ ದೂರಿನಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಠಾಣೆಗೆ ಬಂದು ಸದಾಶಿವ ಅವರಿಂದ ದಾಖಲೆಗಳನ್ನು ಪಡೆದ ಮರಿಯಾ, ದೂರಿಗೆ ತುರ್ತು ಸ್ಪಂದನೆ ನೀಡಿ ದಾಖಲೆ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಇದಾದ ಬಳಿಕ ದಾಖಲೆಗಳನ್ನು ಸಲ್ಲಿಸಿ ಕಂಪನಿಯಲ್ಲಿ ಕೆಲಸ ಪಡೆದಿದ್ದಾರೆ. ಈ ಬಗ್ಗೆ “
ಉದಯವಾಣಿ’ ಜತೆ ಮಾತನಾಡಿದ ಸದಾಶಿವ ಬೆಳಗಲಿ, “ಪೊಲೀಸ್ ಸಿಬ್ಬಂದಿಯಾಗಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಯುವತಿ ಉದ್ಯೋಗ ಪಡೆದ ವಿಚಾರ ಸಂತೋಷ ನೀಡಿತು’ ಎಂದರು.