ಚಾಮರಾಜನಗರ: ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಹಿಳಾ ಪೇದೆ ಆಗಿರುವ ಕಾವೇರಿ ಅವರು ಮೈಸೂರು ವಿವಿ ಪದವಿ ಅರ್ಥಶಾಸ್ತ್ರ ವಿಷಯದಲ್ಲಿ 4 ಚಿನ್ನದ ಪದಕ ಹಾಗೂ 7 ನಗದು ಬಹುಮಾನ ಪಡೆದು ಇಲಾಖೆಗೆ ಹೆಮ್ಮೆ ತಂದಿದ್ದಾರೆ.
ಕಾವೇರಿ ಅವರು 2 ತಿಂಗಳ ಹಿಂದಷ್ಟೇ ಜಿಲ್ಲೆಯ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದು, ಸಿವಿಲ್ ಪೊಲೀಸ್ ಪೇದೆ ತರಬೇತಿ ಪಡೆಯುತ್ತಿದ್ದಾರೆ. ಎಸ್‌ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾವೇರಿ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದವರು. ಬೆಳ್ಳಶೆಟ್ಟಿ, ಮಲ್ಲಿಗಮ್ಮ ದಂಪತಿ ಪುತ್ರಿ. ಕಾವೇರಿ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು.2019ರ ಮೇ ನಲ್ಲಿ ನಡೆದ ಅಂತಿಮ ಬಿಎ ಅರ್ಥಶಾಸ್ತ್ರ ವಿಷಯದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೇ ಅರ್ಥಶಾಸ್ತ್ರ ವಿಷಯದಲ್ಲಿ 1000 ಅಂಕಗಳಿಗೆ 910 ಅಂಕ ಗಳಿಸಿ ಇಡೀ ವಿವಿಗೆ ಮೊದಲಿಗರಾಗಿದ್ದಾರೆ. ಕಳೆದ ಸೋಮವಾರ ನಡೆದ ಮೈಸೂರು ವಿವಿ ಘಟಿಕೋತ್ಸವದಲ್ಲಿ ಅವರಿಗೆ 4 ಚಿನ್ನದ ಪದಕ, 7 ನಗದು ಬಹುಮಾನ ನೀಡಲಾಯಿತು.
ಪ್ರಸ್ತುತ ಕಾವೇರಿ ಅವರು ಚಾ.ನಗರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪೇದೆ ಯಾಗಿ ನೇಮಕವಾಗಿದ್ದಾರೆ. ಚಿನ್ನದ ಪದಕ ಪಡೆದು ಕಾವೇರಿ ಅವರನ್ನು ಎಸ್ಪಿ ದಿವ್ಯಾ ಸಾರಾ ಥಾಮಸ್ ತಮ್ಮ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು. ಕಾವೇರಿ ಅವರ ಸಾಧನೆಯನ್ನು ಮುಕ್ತ ಕಂಠದಿಂದಪ್ರಶಂಸಿಸಿದರು.
“ಉದಯವಾಣಿ’ ಯೊಂದಿಗೆ ಮಾತನಾಡಿದ ಕಾವೇರಿ ಅವರು, ನನ್ನ ಆರ್ಥಿಕ ಪರಿಸ್ಥಿತಿಯಲ್ಲಿ ಉದ್ಯೋಗ ಮುಖ್ಯವಾಗಿರುವುದರಿಂದ ಪೊಲೀಸ್ ಹುದ್ದೆಯಲ್ಲೇ ಮುಂದುವರಿಯುತ್ತೇನೆ. ಹುದ್ದೆಯಲ್ಲಿದ್ದು ಕೊಂಡೇ ಇಲಾಖಾ ಪರೀಕ್ಷೆ ಎದುರಿಸಿ ಪಿಎಸ್‌ಐ ಆಗುವ ಗುರಿ ಹೊಂದಿದ್ದೇನೆ ಎಂದರು.
ನಾನು ಕಷ್ಟಪಟ್ಟಿದ್ದಕ್ಕೂ ಉತ್ತಮ ಪ್ರತಿಫಲ ಬಂದಿದೆ. ಪ್ರತಿ ಸೆಮಿಸ್ಟರ್‌ನಲ್ಲಿ ಅತ್ಯಧಿಕ ಅಂಕ ಪಡೆಯುತ್ತಿದ್ದೆ. ನನ್ನ ಆಸಕ್ತಿಯ ವಿಷಯ ಅರ್ಥ ಶಾಸ್ತ್ರ. ಇದರಲ್ಲಿ ವಿವಿಗೇ ಪ್ರಥಮ ಸ್ಥಾನ ಬಂದಿದ್ದು ಸಂತೋಷ ತಂದಿದೆ. ಇದಕ್ಕಾಗಿ ನಮ್ಮ ಇಲಾಖೆ ಉನ್ನತ ಅಧಿಕಾರಿಗಳು ಸನ್ಮಾನಿಸಿರುವುದು ಹೆಮ್ಮೆ ಮೂಡಿಸಿದೆ.
– ಕಾವೇರಿ, ಪೊಲೀಸ್ ಪೇದೆ