ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯ ಸರ್ಕಾರದ ಉಚಿತ ವಿದ್ಯುತ್ ಯೋಜನೆಗೆ ತಿಲಾಂಜಲಿ ಹಾಡಲು ದೊಡ್ಡ ತಿತೂರಿ ನಡೆಯುತ್ತಿದೆ ಎಂದು ದೆಹಲಿ ಇಂಧನ ಸಚಿವೆ ಅತಿಶಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ರಾಜ್ಯಪಾಲರ ವಿರುದ್ಧ ಹರಿಹಾಯ್ದ ಅವರು, “ದೆಹಲಿಯಲ್ಲಿ ಉಚಿತ ವಿದ್ಯುತ್ ಸ್ಥಗಿತಗೊಳಿಸಲು ಇಂಧನ ಕಂಪನಿಗಳೊಂದಿಗೆ ಸೇರಿ ದೆಹಲಿ ಲೆ.ಗವರ್ನರ್ ವಿ.ಕೆ.ಸಕ್ಸೇನ ಪಿತೂರಿ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಸಿಎಜಿ ಕಚೇರಿಯ ಲೆಕ್ಕಪರಿಶೋಧಕರಿಂದ ಇಂಧನ ಡಿಸ್ಕಾಮ್‌ಗಳ ಲೆಕ್ಕಪರಿಶೋಧನೆ ನಡೆಸಲು ನಿರ್ದೇಶನ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
“ಉಚಿತ ವಿದ್ಯುತ್‌ಗೆ ಸಂಬಂಧಿಸಿದ ಕಡತಗಳನ್ನು ಚುನಾಯಿತ ಸರ್ಕಾರದ ಮುಖ್ಯಮಂತ್ರಿ ಮತ್ತು ಇಂಧನ ಸಚಿವರಿಗೂ ತೋರಿಸುತ್ತಿಲ್ಲ. ಈ ಹಿಂದೆ ಡಿಸ್ಕಾಮ್ ಮಂಡಳಿಗಳಿಗೆ ಸರ್ಕಾರ ನೇಮಿಸಿದ್ದ ತಜ್ಞರನ್ನು ವಜಾಗೊಳಿಸಲಾಯಿತು.
ಇದೀಗ ಡಿಸ್ಕಾಮ್‌ಗಳೊಂದಿಗೆ ಲೆ.ಗವರ್ನರ್ ಶಾಮೀಲಾಗಿರುವ ಬಗ್ಗೆ ಅನೇಕ ಪ್ರಶ್ನೆಗಳು ಏಳುತ್ತವೆ,’ ಎಂದು ಸಚಿವೆ ಅತಿಶಿ ದೂರಿದ್ದಾರೆ. ಉಚಿತ ವಿದ್ಯುತ್ ಸೇವೆ ಮುಂದಯವರಿಯುವುದು ಎಂದು ಕಳೆದ ತಿಂಗಳು ದೆಹಲಿ ಸರ್ಕಾರ ಘೋಷಿಸಿತ್ತು.