ಬೆಂಗಳೂರು: ಚುನಾವಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿಯ ಸೋಲಿನ ಹತಾಶೆ ಅಪಾಯದ ಹಂತ ತಲುಪಿದ್ದು, ರಾಜ್ಯದ ದಲಿತ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಹತ್ಯೆಗಯ್ಯಲು ಸಂಚು ರೂಪಿಸಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಗಂಭೀರ ಆರೋಪ ಮಾಡಿದ್ದಾರೆ.
ಈಚೆಗಷ್ಟೇ ರಾಜಸ್ಥಾನದ ಬಿಜೆಪಿ ಶಾಸಕ ಮದನ್ ದಿಲಾವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಸಾವು ಬಯಸಿದ್ದರು. ಈಗ ಬಿಜೆಪಿಯ ಚಿತ್ತಾಪುರ ಅಭ್ಯರ್ಥಿ ಮಣಿಕಂಠ ರಾಠೊಡ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಖರ್ಗೆ ಮತ್ತು ಅವರ ಇಡೀ ಕುಟುಂಬದ ಹತ್ಯೆಗೆ ಸಂಚು ರೂಪಿಸಿರುವುದು ಆಡಿಯೋ ಸಂಭಾಷಣೆಯಲ್ಲಿ ಬಹಿರಂಗಗೊಂಡಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಈ ಸಂಬಂಧದ ಸುಮಾರು 52 ಸೆಕೆಂಡ್‌ಗಳ ಆಡಿಯೋ ಬಿಡುಗಡೆ ಮಾಡಿದ ಅವರು, ಆಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೊಡ್ ಎನ್ನಲಾದ ವ್ಯಕ್ತಿ ಬಿಜೆಪಿ ಕಾರ್ಯಕರ್ತರೊಬ್ಬರೊಂದಿಗೆ ಸಂಭಾಷಣೆ ವೇಳೆ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬವನ್ನು ಕೊಲೆಗಯ್ಯುವುದಾಗಿ ಹೇಳುತ್ತಾನೆ. ಇದು ಸೋಲಿನ ಹತಾಶೆಯ ಕಟ್ಟಕಡೆಯ ಹಂತವಾಗಿದೆ. ಇದಕ್ಕಿಂತ ಕೀಳುಮಟ್ಟಕ್ಕಿಳಿದು ರಾಜಕೀಯ ಮಾಡಲು ಸಾಧ್ಯವಿಲ್ಲ. ಇದು ಕೇವಲ ಖರ್ಗೆ ಅವರ ಮೇಲೆ ನಡೆಸುವ ಹಲ್ಲೆ ಅಲ್ಲ; ಇಡೀ ಕನ್ನಡಿಗರ ಸ್ವಾಭಿಮಾನ ಮತ್ತು ಅಸ್ಮಿತೆಯ ಕೊಲೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿರ್ಲಕ್ಷಿಸುವಂತಿಲ್ಲ
ಆಡಿಯೋದ ಸತ್ಯಾಸತ್ಯತೆ ಬಗ್ಗೆ ಪ್ರಶ್ನಿಸಿದಾಗ, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬೆದರಿಕೆ ಹಾಕಿರುವುದು ಬಿಜೆಪಿ ಅಭ್ಯರ್ಥಿ ಹಾಗೂ ಆ ಪಕ್ಷದ ನಾಯಕರ ನೀಲಿಗಣ್ಣಿನ ಹುಡುಗ. ಹಾಗಾಗಿ ಇದನ್ನು ನಿರ್ಲಕ್ಷಿಸುವಂತಿಲ್ಲ. ಇದೇ ಕಾರಣಕ್ಕೆ ಈ ವಿಚಾರದಲ್ಲಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಆದರೆ ಜನ ಇದಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಪ್ರಧಾನಿ ಕರ್ನಾಟಕದಲ್ಲೇ ಪ್ರಚಾರ ನಡೆಸುತ್ತಿದ್ದಾರೆ. ಹತ್ಯೆಗೆ ಸಂಚು ನಡೆಸಿದ್ದರೂ ಮೌನಕ್ಕೆ ಶರಣಾಗಿರುವುದು ಏನು ಸೂಚಿಸುತ್ತದೆ ಎಂದು ಪ್ರಶ್ನಿಸಿದ ಅವರು, ಈ ಪ್ರಕರಣದ ಬಗ್ಗೆ ದೂರು ನೀಡಲಾಗುವುದು. ಅನಂತರ ಕಾನೂನು ಪ್ರಕ್ರಿಯೆಗಳೂ ನಡೆಯುತ್ತವೆ. ಆದರೆ ವಾಸ್ತವವಾಗಿ ಚುನಾವಣಾ ಆಯೋಗ ಏನೂ ಮಾಡುತ್ತಿಲ್ಲ. ಬರೀ ಕಾಂಗ್ರೆಸ್‌ಗೆ ನೋಟಿಸ್ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಸ್ಥರ ಹತ್ಯೆ ಸಂಚು ಕುರಿತ ಆಡಿಯೋ ತಿರುಚಲಾಗಿದೆಯೇ ಎಂದು ನೋಡಬೇಕು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುವುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ