ಮಂಗಳೂರು: ರಾಹುಲ್ ಗಾಂಧಿ ಅವರ ಬಗ್ಗೆ ಪ್ರಚೋದನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಶಾಸಕ ಭರತ್ ಶೆಟ್ಟಿ ಮೇಲೆ ಎಫ್ ಐ ಆರ್ ಖಂಡಿಸಿ ಕಾವೂರಿನಲ್ಲಿ ಬಿಜೆಪಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು. ವಿಪಕ್ಷ ನಾಯಕ ಆರ್. ಅಶೋಕ್, ಹಲವು ನಾಯಕರು, ಜಿಲ್ಲೆಯ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾದರು.
ಅಶೋಕ್ ಅವರು ಮಾತನಾಡಿ, ‘ಪೊಲೀಸರ ಮೇಲೆ ಒತ್ತಡ ಹಾಕಿ ಬಿಜೆಪಿ ಎಂಎಲ್ ಎ ಗಳ ಮಾನಸಿಕ ಸ್ಥೈರ್ಯ ಕುಗ್ಗಿಸಲು ಸಂಚು ಇದು. ಬಿಜೆಪಿ ಶಾಸಕರನ್ನು ಭಯಗೊಳಿಸುವ ಕಾಂಗ್ರೆಸ್ ನ ಕುತಂತ್ರ. ಪೊಲೀಸರು ಅವರ ಪರ ನಿಂತಿರುವುದ ನಾಚಿಕೆಗೇಡು.ನರೇಂದ್ರ ಮೋದಿಯವರನ್ನು ಹತ್ಯೆ ಮಾಡಬೇಕೆಂದವರಿಗೆ ಕಾಂಗ್ರೆಸಿಗರು ಪಾರ್ಲಿಮೆಂಟ್ ಸೀಟ್ ನೀಡಿದ್ದಾರೆ.ಕಾಂಗ್ರೆಸ್ ಹಿಂದೂ ವಿರೋಧಿ ನೀತಿಯನ್ನು ಪದೇ ಪದೇ ತೋರಿಸುತ್ತಿದೆ’ ಎಂದು ಕಿಡಿ ಕಾರಿದರು.
ಅಲ್ಪಸಂಖ್ಯಾಕರ ತುಷ್ಟೀಕರಣ ವಿರುದ್ದ ನಮ್ಮ ಹೋರಾಟ.ಕಳೆದ ಬಾರಿ ಮೂವತ್ತಾರಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆ ನಡೆಯಿತು. ಜನ ಬುದ್ದಿ ಕಲಿಸಿದ್ದರು. ಕಾಂಗ್ರೆಸಿಗರು ಅಧಿಕಾರಕ್ಕೆ ಬಂದ ಕೂಡಲೆ ಬಹುಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಕಿಡಿ ಕಾರಿದರು.
ವಾಲ್ಮೀಕಿ ಹಗರಣ ದಲಿತರ ಹಣ. ಅವರ ಮನೆ, ವಿದ್ಯುತ್ ಗೆ ಮಂಜೂರಾದ ಹಣ. ನೂರ ಎಂಬತ್ತೇಳು ಕೋಟಿಯಲ್ಲಿ ಚಿಲ್ಲರೆಯನ್ನೂ ಬಿಡಲಿಲ್ಲ.ಸರಕಾರ ಐಸಿಯು ನಲ್ಲಿದೆ. ಬಹಳ ದಿನ ಉಳಿಯಲ್ಲ. ಇದು ತಾಲಿಬಾನಿಗಳ ಸರಕಾರ. ಏನೇ ಮಾಡಿದರೂ ಮಂಗಳೂರಿನಲ್ಲಿ ಗೆಲ್ಲಲ್ಲ.ಅದಕ್ಕೆ ಕೇಸು ಹಾಕುತ್ತಿದ್ದಾರೆ. ಗೊಡ್ಡು ಬೆದರಿಕೆಗೆ ಬಿಜೆಪಿಯವರು ಜಗ್ಗಲ್ಲ. ಕಾಂಗ್ರೆಸಿಗರು ಮಜಾವಾದಿಗಳು. ನಾವು ಹೋರಾಟದಿಂದ ಬಂದವರು. ನೂರು ಕೇಸು ಹಾಕಿದರೂ ಹೆದರುವುದಿಲ್ಲ.ಇಂದೇ ಚುನಾವಣೆ ಮಾಡಿದರೂ ಕಾಂಗ್ರೆಸ್ ಗೆ ಡಿಪಾಸಿಟ್ ಬರುವುದಿಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಹಾಲು ಡೀಸೆಲ್ ಪೆಟ್ರೋಲ್, ಹಾಲು, ಸ್ಟಾಂಪ್ ಪೇಪರ್ ಬೆಲೆ ಏರಿಸಿದರು.ಸರಕಾರಕ್ಕೆ ಮಾನ ಮರ್ಯಾದೆ ಇದೆಯಾ? ಸರಕಾರದ ಬಳಿ ಹಣವಿಲ್ಲ ಅದಕ್ಕೆ ದಲಿತರ ಹಣ ಲೂಟಿ ಮಾಡುತ್ತಿದ್ದಾರೆ. ಲೂಟಿಕೋರರ ಪಾರ್ಟಿ ಕಾಂಗ್ರೆಸ್. ನಾವು ಯಾರ ವಂಶದ ಹೆಸರು ಹೇಳಿ ಮಜಾ ಮಾಡಿಕೊಂಡು ಬಂದಿಲ್ಲ.ಪಾಕಿಸ್ಥಾನಕ್ಕೆ ಜೈ ಹೇಳುವವರಿಗೆ ಮಂಗಳೂರಿನಲ್ಲಿ ಹೆಜ್ಜೆ ಇಡಲು ಬಿಡುವುದಿಲ್ಲ.ಯಾರೂ ಭಯ ಪಡಬೇಡಿ. ನಿಮ್ಮ ಜತೆ ಬಿಜೆಪಿ ಇದೆ.
ಹಿಂದೂ ಧರ್ಮವಿದ್ದರೆ ದೇಶ ಉಳಿಯುತ್ತದೆ ಎಂದು ಅಶೋಕ್ ಹೇಳಿದರು.
ಪ್ರತಿಭಟನಾ ಸಭೆಯ ನಂತರ ಪೊಲೀಸ್ ಠಾಣೆಯ ಕಡೆ ಹೊರಟ ನಾಯಕರು, ಕಾರ್ಯಕರ್ತರಿಗೆ ಪೊಲೀಸರು ತಡೆದರು.