Advertisement

CBI ನನ್ನ ವಿರುದ್ಧ ಬಿಜೆಪಿಯಿಂದ ಷಡ್ಯಂತ್ರ: ಡಿಕೆಶಿ

11:55 PM Jan 01, 2024 | Team Udayavani |

ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ರಾಜ್ಯ ಸರಕಾರ ಸಿಬಿಐ ತನಿಖೆ ಅನುಮತಿ ಹಿಂಪಡೆದಿದ್ದರೂ ಕಿರುಕುಳ ಮುಂದುವರಿದಿದೆ. ಕೇರಳ ಮೂಲದ ಜೈ ಹಿಂದ್‌ ಚಾನೆಲ್‌ ಎಂಡಿ ಹಾಗೂ ತಮಗೆ ಸಿಬಿಐ ನೋಟಿಸ್‌ ಜಾರಿ ಮಾಡಿದೆ ಎಂದರು.

ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರಕಾರ ರದ್ದುಪಡಿಸಿದ ಬಳಿಕವೂ ಸಿಬಿಐನವರೂ ಸಬ್‌ ರಿಜಿಸ್ಟ್ರಾರ್‌ ಕಚೇರಿ, ಸರಕಾರಿ ಕಚೇರಿ, ಸಹಕಾರಿ ಸೊಸೈಟಿ, ನಾನು ಅಧ್ಯಕ್ಷನಾಗಿರುವ ಸಂಸ್ಥೆ ಸಹಿತ ಅನೇಕರಿಗೆ ನೋಟಿಸ್‌ ಕೊಟ್ಟಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ನೋಟಿಸ್‌ ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಉದ್ದೇಶ ಏನು ಎಂಬುದು ಗೊತ್ತಿಲ್ಲ. ಆದರೆ ಮೇಲ್ನೋಟಕ್ಕೆ ಅವರು ನನಗೆ ಹಾಗೂ ಪಕ್ಷಕ್ಕೆ ತೊಂದರೆ ನೀಡಲು ದೊಡ್ಡ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ದೂರಿದರು.

ಸಿಬಿಐ ತನಿಖೆಯನ್ನು ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿದೆ. ಸಿಬಿಐಗೆ ನೀಡಿದ್ದ ಅನುಮತಿಯನ್ನು ಸರಕಾರ ಹಿಂಪಡೆದಿರುವುದನ್ನು ಹೈಕೋರ್ಟ್‌ ಒಪ್ಪಿದ್ದರೂ ಸಿಬಿಐ ಯಾಕೆ ನೋಟಿಸ್‌ ನೀಡುತ್ತಿದೆ ಎಂಬುದು ಗೊತ್ತಿಲ್ಲ. ಅವರ ಬಳಿ ನನ್ನ ಎಲ್ಲ ದಾಖಲೆಗಳಿವೆ. ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ದಾಖಲೆಗಳನ್ನು ಸಿಬಿಐ, ಲೋಕಾಯುಕ್ತಕ್ಕೆ ನೀಡಬೇಕಿದೆ ಎಂಬುದು ತಮಗೆ ತಿಳಿದಿರುವ ಕಾನೂನಿನ ಅರಿವು ಎಂದರು.

ನಾನು ಯಾವುದೇ ತಪ್ಪು ಮಾಡಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ನನಗೆ ಎಲ್ಲಿ ನ್ಯಾಯ ಸಿಗಬೇಕೋ ಅಲ್ಲಿ ಸಿಗುತ್ತದೆ. ಸಿಬಿಐ ಅಧಿಕಾರಿಗಳಿಗೆ ನಾನು ಎಲ್ಲ ದಾಖಲೆ ನೀಡಿದ್ದೆ. ಅವರು ಶೇ.10ರಷ್ಟು ಕೂಡ ತನಿಖೆ ಮಾಡಿರಲಿಲ್ಲ. ಆದರೆ ನ್ಯಾಯಾಲಯದಲ್ಲಿ ಶೇ.90ರಷ್ಟು ತನಿಖೆ ಮುಗಿದಿದೆ ಎಂದು ಹೇಳಿದ್ದರು. ಅವರು ಏನಾದರೂ ಮಾಡಲಿ. ನನ್ನನ್ನು ಒಳಗೆ ಹಾಕಿಸುವ ಆಸೆ ಇದ್ದರೆ ಹಾಕಿಸಲಿ. ನಾನು ಸಿದ್ಧನಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ಸಚಿವರ ಸ್ಪರ್ಧೆ ಬಗ್ಗೆ ಹೈಕಮಾಂಡ್‌ ನಿರ್ಧಾರ
ಬೆಂಗಳೂರು: ಲೋಕಸಭಾ ಚುನಾವಣೆಗೆ ಸಚಿವರು ಸ್ಪರ್ಧಿಸಬೇಕೋ- ಬೇಡವೋ ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ. ಆದರೆ ಇದುವರೆಗೂ ಯಾವುದೇ ತೀರ್ಮಾನ ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕೆಲವು ಸಚಿವರು ಕಣಕ್ಕಿಳಿಯುವ ಪರಿಸ್ಥಿತಿ ಬರಬಹುದು, ಬಾರದೆಯೂ ಇರಬಹುದು. ಅದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದರು.

ನಮ್ಮ ಪಕ್ಷದಲ್ಲಿ ಅನೇಕ ಅಭ್ಯರ್ಥಿಗಳಿದ್ದಾರೆ, ಕೆಲವೆಡೆ 3-4 ಆಕಾಂಕ್ಷಿಗಳು ಇದ್ದರೆ, ಮತ್ತೆ ಕೆಲವೆಡೆ ಎಂಟತ್ತು ಮಂದಿ ಆಕಾಂಕ್ಷಿಗಳಿದ್ದಾರೆ. ಅವರು ಕೇಳು ವುದಕ್ಕಿಂತ ನಾವು ಯಾರನ್ನು ಕಣಕ್ಕೆ ಇಳಿಸುತ್ತೇವೆ ಎಂಬುದು ಮುಖ್ಯ ಎಂದು ಹೇಳಿದ ಶಿವಕುಮಾರ್‌, ಯಾವುದೇ ಸಚಿವರನ್ನು ಅಭ್ಯರ್ಥಿ ಮಾಡಿ ಎಂದು ವರದಿ ಕೊಟ್ಟಿಲ್ಲ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್‌ ನನಗೆ ವರದಿ ಕೇಳಿದ್ದು, ನಾನು ಇನ್ನೂ ವರದಿಯನ್ನೇ ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ 4ರಂದು ದಿಲ್ಲಿಯಲ್ಲಿ ಸಭೆ ನಡೆಯಲಿದೆ, ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲು ನನಗೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ. ಅವರು ಯಾವ ಮಾನದಂಡ ನಿಗದಿ ಮಾಡುತ್ತಾರೋ ಅದರ ಪ್ರಕಾರ ನಾವು ಕೆಲಸ ಮಾಡುತ್ತೇವೆ. ಇದೇ 10ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದು, ಬೆಳಗ್ಗೆ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಜತೆ, ಮಧ್ಯಾಹ್ನ ಬ್ಲಾಕ್‌ ಅಧ್ಯಕ್ಷರ ಜತೆ ಸಭೆ ಮಾಡುತ್ತೇವೆ. ಈ ಸಭೆಗೆ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.

ಅಹ್ಮದ್‌ ಪಟೇಲ್‌ ಅವರ ರಾಜ್ಯಸಭೆ ಚುನಾವಣೆ ಕಾರಣ ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾ ರೆ. ಅಹ್ಮದ್‌ ಪಟೇಲ್‌ ಅವರೇ ಇಂದು ನಮ್ಮ ಜತೆ ಇಲ್ಲ. ಆದರೂ ನನಗೆ ಕಿರುಕುಳ ಮುಂದುವರಿಸಿದ್ದಾರೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಗೊತ್ತು. ಕಾನೂನು ಇದೆ, ನನ್ನ ಕೊನೆಯುಸಿರು ಇರುವವರೆಗೂ ಹೋರಾಟ ಮಾಡುತ್ತೇನೆ.
-ಡಿ.ಕೆ.ಶಿವಕುಮಾರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next