Advertisement

ಬೃಹತ್‌ ಯೋಜನೆಗಳಿಲ್ಲದ ಸಮಾಧಾನಕರ ಬಜೆಟ್‌

07:30 AM Feb 17, 2018 | |

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2018-19 ನೇ ಸಾಲಿನ ಬಜೆಟ್‌ನಲ್ಲಿ ಹಾಸನ ಜಿಲ್ಲೆಯ ಅಭಿವೃದ್ಧಿಯ ಬೃಹತ್‌ ಯೋಜನೆಗಳನ್ನು ಘೋಷಣೆ ಮಾಡದಿದ್ದರೂ ಜನರು ಸಮಾಧಾನಪಡಬಹುದಾದ ಕೆಲವು ರೈತಪರ ಯೋಜನೆಗಳನ್ನು ಪ್ರಕಟಿಸಿದ್ದಾರೆ.

Advertisement

ಹಾಸನದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಸ್ಥಾಪನೆಯ ಘೋಷಣೆಯು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದ್ದು, ಬಹುದಿನಗಳ ಹಾಸನ ನಗರದ ಜನರ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆಗೆ ಬಜೆಟ್‌ ಮಂಡನೆಗೆ ಮುನ್ನಾದಿನ ಸಚಿವ ಸಂಪುಟದ ಅನುಮೋದನೆ ನೀಡಿರುವುದೂ ಹಾಸನದ ಜನರಿಗೆ ಹರ್ಷ ತಂದಿದೆ.

ಹಾಸನದ ಚನ್ನಪಟ್ಟಣ ಕೆರೆ, ಸತ್ಯಮಂಗಲ ಕೆರೆ ಮತ್ತು ಹುಣಸಿನ ಕೆರೆಗಳ ಪುನಶ್ಚೇತನಕ್ಕೆ ನೆರವು ನೀಡುವುದಾಗಿ  ಘೋಷಣೆ ಮಾಡಿರುವುದು ಹಿರಿಯ ನಾಗರಿಕರ ವೇದಿಕೆಯು ಕಳೆದೊಂದು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ. ಹಾಗೆಯೇ ಅರಕಲಗೂಡು ತಾಲೂಕು ಕೊಣನೂರು ಹಾಗೂ ಚನ್ನರಾಯಟ್ಟಣದ ಅಮಾನಿ ಕೆರೆಗಳಿಂದ ನೀರೆತ್ತಿ ವಿವಿಧ ಕೆರೆಗಳಿಗೆ ನೀರು ತುಂಬಿಸುವ 70 ಕೋಟಿ ರೂ. ಯೋಜನೆಗೂ ನೆರವು ಘೋಷಣೆ ಮಾಡಿರುಮದು ರೈತ ಸಮುದಾಯಕ್ಕೆ ಸಮಾಧಾನ ತಂದಿದೆ.

ಹಾಸನದ ಹೊರ ವಲಯದ ಹಳ್ಳಿಗಳು ಹಾಗೂ ಸತ್ಯಮಂಗಲ ಕೆರೆಗೆ ನೀರು ತುಂಬಿಸುವ 20 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರು ಯೋಜನೆಗೂ ಮಂಜೂರಾತಿ ನೀಡಿರುವುದು ನಾಲ್ಕು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ. ಈ ಯೋಜನೆಯಿಂದ ಹಾಸನದ ವಿದ್ಯಾನಗರ, ವಿವೇಕ ನಗರ, ಚಿಕ್ಕ ಹೊನ್ನೇಹಳ್ಳಿ ತೇಜೂರು, ಸತ್ಯಮಂಗಲ ಸೇರಿದಂತೆ ಹಲವು ಬಡಾವಣೆಗಳ ಕುಡಿಯುವ ನೀರಿನ ಬವಣೆ ನಿವಾರಣೆಗೆ ನೆರವಾಗಲಿದೆ.

ರೈತರಿಗೆ ಇನ್ನೊಂದು ಸಂತೋಷದ ವಿಷಯವೆಂದರೆ ತೆಂಗು ಬೆಳೆ ಪುನಶ್ಚೇತನಕ್ಕೆ ನೆರವು ಘೋಷಣೆ ಮಾಡಿರುವುದು. ತೆಂಗು ಬೆಳೆಗಾರರಿಗೆ ಸಂತಸ ತಂದಿದೆ. ಸತತ ಬರಗಾಲದಿಂದ ತೆಂಗಿನ ಮರಗಳನ್ನು ಕಳೆದುಕೊಂಡಿದ್ದ ಬೆಳೆಗಾರರಿಗೆ ಹೊಸದಾಗಿ ತೆಂಗು ಬೆಳೆ ಬೆಳೆಸಲು ನೆರವು ಸಿಗಲಿದೆ. ಜೊತೆಗೆ ಅರಕಲಗೂಡು ತಾಲೂಕು ರುದ್ರಪಟ್ಟಣದಲ್ಲಿ ವಿದ್ಯುತ್‌ ಉಪಕೇಂದ್ರ ಸ್ಥಾಪನೆಯನ್ನೂ ಘೋಷಣೆ ಮಾಡಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನಿಂದ ನಾಗಮಂಗಲ ತಾಲೂಕಿಗೆ ಹೇಮಾವತಿ ನೀರು ಹರಿಸುವ ಸಾಹುಕಾರ್‌ ಚನ್ನಯ್ಯ ನಾಲೆಯ ಅಧುನೀಕರಣ ಯೋಜನೆಗೂ ಬಜೆಟ್‌ನಲ್ಲಿ  ಪ್ರಸ್ತಾಪ ಮಾಡಿರುವುದು ಆ ಭಾಗದ ರೈತರಿಗೆ ಸಮಾಧಾನ ತಂದಿದೆ.

Advertisement

ದೂರದ ಬೆಂಗಳೂರು, ಮೈಸೂರು ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ತೊಂದರೆ ನಿವಾರಣೆಯಾಗಲಿದೆ. ಬೇಲೂರು, ಹಳೆಬೀಡು, ಶ್ರವಣಬೆಳಗೊಳದಲ್ಲಿ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿಗೆ ನೆರವು ಘೋಷಣೆ ಮಾಡಿರುವುದು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ನೆರವಾಗಲಿದ್ದು, ಆ ಮೂಲಕ ಉದ್ಯೋಗ ಸೃಷ್ಟಿಗೂ ಪೂರಕವಾಗಿದೆ. ಅರಸೀಕೆರೆ ಪಟ್ಟಣದ ಒಳ ಚರಂಡಿ ಯೋಜನೆಗೂ ನೆರವು ಘೋಷಣೆ ಮಾಡಿದ್ದಾರೆ.

ದೂರದೃಷ್ಟಿಯ ಬೃಹತ್‌ ಅಭಿವೃದ್ಧಿ ಯೋಜನೆಗಳಾದ ವಿಮಾನ ನಿಲ್ದಾಣ, ಗೊರೂರಿನ ಹೇಮಾವತಿ ಜಲಾಯಶದ ಮುಂಭಾಗ ಉದ್ಯಾನವನ ನಿರ್ಮಾಣ, ಹಾಸನ ತಾಲೂಕು ದುದ್ದ, ಶಾಂತಿಗ್ರಾಮ ಹೋಬಳಿಯ ಗ್ರಾಮಗಳಿಗೆ ಹೇಮಾವತಿ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು, ಆನೆ ಕಾರಿಡಾರ್‌ ಮತ್ತಿತರ ದೂರ ದೃಷ್ಟಿಯ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸದಿದ್ದರೂ ಮುಖ್ಯಮಂತ್ರಿಯವರು ಜಿಲ್ಲೆಯ ಜನರನ್ನು ಸಮಾಧಾನಪಡಿಸುವ ಯೋಜನೆಗಳನ್ನು ಚುನಾವಣಾ ವರ್ಷದಲ್ಲಿ ಪ್ರಕಟಿಸಿ ಸಮಾಧಾನಗೊಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕೃಷಿ, ಕೈಗಾರಿಕೆಗೆ ಪೂರಕ ವಾತಾವರಣವಿದೆ. ಆದರೆ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ  ವಿಮಾನ ನಿಲ್ದಾಣ, ಗೊರೂರಿನ ಉದ್ಯಾನವನ, ಆನೆ ಕಾರಿಡಾರ್‌, ಆಲೂಗಡ್ಡೆ ಬೆಳೆಯ ಪ್ರೋತ್ಸಾಹಕರ ಯೋಜನೆಗಳನ್ನು ಪ್ರಕಟಿಸದೆ ಮೂಗಿಗೆ ತುಪ್ಪಹಚ್ಚುವಂತಹ ಚುನಾವಣೆಯಲ್ಲಿ ಲಾಭ ಪಡೆಯುವ ಯೋಜನೆಗಳನ್ನು ಜಿಲ್ಲೆಗೆ ಪ್ರಕಟಿಸಿದ್ದಾರೆ. ಇನ್ನು ಎರಡು ತಿಂಗಳೂ ಅಧಿಕಾರದಲ್ಲಿರದ ಇವರು ಬಜೆಟ್‌ ಮಂಡಿಸಿ ಏನು ಪ್ರಯೋಜನವಿದೆ ?
ಎಚ್‌.ಎಸ್‌.ರಘು, ಜಿಲ್ಲಾ ಜೆಡಿಎಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next