ಆಳಂದ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜೀವನದ ಉದ್ದೇಶಿತ ಗುರಿಯೊಂದಿಗೆ ದೇಶ ಭಕ್ತರ ಜೀವನ ಸಾಧನೆ ಮೈಗೂಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತಾಬಾಯಿ ಅಕ್ಕಿ ಹೇಳಿದರು.
ಪಟ್ಟಣದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠದ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ, ಶ್ರೀ ಮಠದ ಪೀಠಾಧಿಪತಿ ಶ್ರೀ ಸಿದ್ಧೇಶ್ವರ ಶಿವಾಚಾರ್ಯರ 28ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಸ್ವಾಸ್ಥ್ಯವಾಗಿರಲು ಹೆಣ್ಣು, ಗಂಡು ಸಮಾನವಾಗಿ ಕಲಿಯುವುದು ಮುಖ್ಯವಾಗಿದೆ. ಹೆಣ್ಣುಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಬೇಕು. ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರು ದೇಶ, ಸಮಾಜ, ಶಿಕ್ಷಣಕ್ಕಾಗಿ ಶ್ರಮಿಸಿದ ಮಹನೀಯರ ತತ್ವಗಳನ್ನು ಮೈಗೂಡಿಸಿಕೊಂಡು ಕಲಿಕೆಗೆ ಒತ್ತು ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು, ಪೀಠಾಧಿಪತಿ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿ ಮಾತನಾಡಿ, ಶಿಕ್ಷಣ ಮತ್ತು ಅನ್ನದಾಸೋಹ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಲು ಬದ್ಧವಾಗಿದ್ದೇವೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಉಪಾಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಮಾತನಾಡಿ, ದೇಶಕ್ಕೆ ನಿಸ್ವಾರ್ಥವಾಗಿ ಸಮಾಜ ಸೇವೆ ಸಲ್ಲಿಸುವವರ ಕೊರತೆಯಿದೆ. ವಿದ್ಯಾರ್ಥಿಗಳು ಈಗಿನಿಂದಲೇ ಒಳ್ಳೆಯ ಸಂಸ್ಕಾರ ಮೈಗೂಡಿಸಿಕೊಂಡು ಕಠಿಣ ಪರಿಶ್ರಮ, ಅಧ್ಯಯನದ ಮೂಲಕ ಸಮಾಜ ಸೇವೆ, ನಿಸ್ವಾರ್ಥ ಜೀವನ, ಉತ್ತಮ ನಾಗರಿಕರಾಗಲು ಪ್ರಯತ್ನಿಸಬೇಕು ಎಂದರು.
ಸಂಸ್ಥೆ ಕಾರ್ಯದರ್ಶಿ ಅಣ್ಣಾರಾವ್ ಪಾಟೀಲ, ಸಿದ್ಧಯ್ಯ ಸ್ವಾಮಿ, ನಿವೃತ್ತ ಮುಖ್ಯಶಿಕ್ಷಕ ಬಸವಂತರಾಯ ಜಿಡ್ಡೆ, ಶಿಕ್ಷಕಿ ಆಶಾ ಲತಾ, ಮಹಿಬೂಬ ಬಿ. ರೋಪಾ, ಪ್ರಿಯಾಂಕ್, ಕಿರಣ, ಸಂತೋಷಿ ಮತ್ತಿತರರು ಇದ್ದರು.
ಮುಖ್ಯ ಶಿಕ್ಷಕ ದೀಪಕ ಗುಂಡಗುಳೆ ಸ್ವಾಗತಿಸಿದರು, ಕಳಕೇಶ ನಿರೂಪಿಸಿದರು, ಮಡಿವಾಳಯ್ಯ ಸ್ವಾಮಿ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.