ಹೊಸಬರ ಸಿನಿಮಾವೊಂದು ತನ್ನ ಟೈಟಲ್ ಮೂಲಕವೇ ಒಂದಷ್ಟು ಮಂದಿಯ ಗಮನ ಸೆಳೆಯುತ್ತಿದೆ. ಅಂದಹಾಗೆ, ಆ ಸಿನಿಮಾದ ಹೆಸರು ” ಕಾನ್ಸೀಲಿಯಂ’. ಇನ್ನೊಂದು ವಿಶೇಷವೆಂದರೆ, ಬಹುತೇಕ ಸಾಪ್ಟ್ ವೇರ್ ಇಂಜಿನಿಯರಿಂಗ್ ಹಿನ್ನೆಲೆ ಇರುವ ಹೊಸಬರೇ ಸೇರಿಕೊಂಡು ಈ ಚಿತ್ರವನ್ನು ನಿರ್ಮಿಸಿ, ತೆರೆಗೆ ತರುತ್ತಿದ್ದಾರೆ.
ಇನ್ನು ಏನಿದು “ಕಾನ್ಸೀಲಿಯಂ’ ಸಿನಿಮಾದ ಹೆಸರು ಈ ಥರ ಇದೆಯಲ್ಲ ಎಂಬ ಪ್ರಶ್ನೆಗೆ ಚಿತ್ರತಂಡದಿಂದ ಬರುವ ಉತ್ತರ ಹೀಗಿದೆ, “ಇದೊಂದು ಗ್ರೀಕ್ ಪದ. ಗ್ರೀಕ್‌ನಲ್ಲಿ ” ಕಾನ್ಸೀಲಿಯಂ’ ಎಂಬ ಪದಕ್ಕೆ ಯೋಜನೆ, ತೀರ್ಪು, ಮಾರ್ಗದರ್ಶನ, ಬುದ್ಧಿವಂತಿಕೆ… ಹೀಗೆ ಹಲವು ಅರ್ಥಗಳಿವೆ. ನಮ್ಮ ಸಿನಿಮಾದ ಸಬೆjಕ್ಟ್‌ನಲ್ಲೂ ಹಲವು ಅರ್ಥಗಳು, ಆಯಾಮಗಳು ಇರುವುದರಿಂದ ಸಿನಿಮಾಕ್ಕೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ” ಕಾನ್ಸೀಲಿಯಂ’ ಎಂಬ ಟೈಟಲ್ ಇಟ್ಟಿದ್ದೇವೆ’ ಎನ್ನುತ್ತದೆ ಚಿತ್ರತಂಡ.
ಸಮರ್ಥ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೆ ತೆರೆಮೇಲೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರೀತಂ, ಅರ್ಚನಾ ಲಕ್ಷ್ಮೀನರಸಿಂಹ ಸ್ವಾಮಿ, ಖುಷಿ ಆಚಾರ್, ಜಗದೀಶ್ ಮಲ್ನಾಡ್ ಮೊದಲಾದವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಬೋಲ್ಡ್ ಲುಕ್ ನಲ್ಲಿ ನಿಶ್ವಿಕಾ ನಾಯ್ಡು: ‘ದಿಲ್ ಪಸಂದ್’ ನಲ್ಲಿ ರೊಮ್ಯಾಂಟಿಕ್ ಜೋಡಿ
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, “ಇದೊಂದು ಔಟ್ ಆ್ಯಂಡ್ ಔಟ್ ಸೈನ್ಸ್ ಫಿಕ್ಷನ್ ಕಂ ಸೈಕಾಲಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಆರಾಮಾಗಿದ್ದ ಇಬ್ಬರು ಟೆಕ್ಕಿ ಸೋದರರ ಜೀವನದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಘಟನೆಗಳಿಂದ ಏನೆಲ್ಲ ನಡೆಯುತ್ತದೆ. ಅದಕ್ಕೆಲ್ಲ ಕಾರಣವೇನು ಅನ್ನೋದು ಚಿತ್ರಕಥೆಯ ಒಂದು ಎಳೆ. ಕನ್ನಡ ಪ್ರೇಕ್ಷಕರಿಗೆ ಇದೊಂದು ಹೊಸಥರದ ಸಿನಿಮಾವಾಗಿದ್ದು, ಇಡೀ ಸಿನಿಮಾ ಕೊನೆವರೆಗೂ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಹಿಡಿದು ಕೂರಿಸುತ್ತದೆ’ ಎಂಬ ಭರವಸೆಯನ್ನು ನೀಡುತ್ತದೆ.
“ಸೀತಾರಾಮ ಶಾಸ್ತ್ರೀ ಪ್ರೊಡಕ್ಷನ್ ಹೌಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಕಾನ್ಸೀಲಿಯಂ’ ಗೆ ರೇಷ್ಮಾ ರಾವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ದ್ವೈಪಾಯನ ಸಿಂಘ ಸಂಗೀತ ಸಂಯೋಜಿಸಿದ್ದು, ಸುದರ್ಶನ್ ಜಿ. ಕೆ ಛಾಯಾಗ್ರಹಣವಿದೆ.
ಇತ್ತೀಚೆಗಷ್ಟೇ “ಕಾನ್ಸೀಲಿಯಂ’ ಟೀಸರ್ ಬಿಡುಗಡೆ ಮಾಡಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಡಿಸೆಂಬರ್ ವೇಳೆಗೆ ಚಿತ್ರವನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ.