Advertisement

ಅಗ್ರಿಗೇಟರ್‌ ನಿಯಮ ಮಾರ್ಪಾಡಿಗೆ ಚಿಂತನೆ; ಆಟೋ ಸೇವೆ ಸೇರ್ಪಡೆ?

02:37 PM Oct 14, 2022 | Team Udayavani |

ಬೆಂಗಳೂರು: ಆ್ಯಪ್‌ ಆಧಾರಿತ ಸಾರಿಗೆ ಸೇವೆಗಳಿಗೆ ಸಂಬಂಧಿಸಿದ ನಿಯಮವು ಹಲ್ಲುಕಿತ್ತ ಹಾವು ಆಗಿದ್ದು, ಅದನ್ನು ಬಲಗೊಳಿಸಲು ಮಾರ್ಪಾಡು ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. “ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ- 2016’ರಡಿ ನಿಯಮ ಉಲ್ಲಂಘಿಸುವ ಅಗ್ರಿಗೇಟರ್‌ ಕಂಪನಿಗಳ ವಿರುದ್ಧ ಒಂದು ಸಣ್ಣ ಪ್ರಮಾಣದ ದಂಡ ಪ್ರಯೋಗ ರತುಪಡಿಸಿದರೆ, ಯಾವುದೇ ಕಠಿಣ ಕ್ರಮಗಳ ಬಗ್ಗೆ ಉಲ್ಲೇಖವಿಲ್ಲ.

Advertisement

ಆಟೋಗಳ ಸೇವೆ ಕುರಿತೂ ಪ್ರಸ್ತಾಪ ಇಲ್ಲ. ಇದು ಪರೋಕ್ಷವಾಗಿ ಸಾರಿಗೆ ಇಲಾಖೆ ಅಸಹಾಯಕತೆಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಯಮದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲು ಇಲಾಖೆ ಚಿಂತನೆ ನಡೆಸಿದೆ. ಅಲ್ಲದೆ, 2016ರಿಂದ 2018ರ ಅವಧಿಯಲ್ಲಿ ಉದ್ದೇಶಿತ ನಿಯಮವನ್ನು ರೂಪಿಸಲಾಗಿದೆ. ಇದರ ನಂತರ ಸಾಕಷ್ಟು ಬೆಳವಣಿಗೆಗಳಾಗಿವೆ. ಈ ಅವಧಿಯಲ್ಲಿ ಹಲವಾರು ಅಗ್ರಿಗೇಟರ್‌ಗಳು ಸೇರಿಕೊಂಡಿದ್ದಾರೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸೇವೆ ನೀಡಲಾಗುತ್ತಿದೆ. ಮತ್ತೂಂದೆಡೆ ಪರವಾನಗಿ ನವೀಕರಿಸಿಕೊಳ್ಳದೆ ಸೇವೆ ಒದಗಿಸುವುದು, ಬೇಕಾಬಿಟ್ಟಿ ದರ ವಸೂಲು, ಗ್ರಾಹಕರು ಮತ್ತು ಚಾಲಕರಿಗೆ ವಂಚನೆಯಂತಹ ಹಲವು ರೀತಿಯ ಉಲ್ಲಂಘನೆಗಳೂ ಆಗುತ್ತಿವೆ. ಆದರೆ, ಇದೆಲ್ಲದಕ್ಕೂ ಸದ್ಯಕ್ಕೆ ದಂಡ ವಿಧಿಸಲು ಮಾತ್ರ ಅವಕಾಶ ಇದೆ.

“ಪ್ರಸ್ತುತ ನಿಯಮದಲ್ಲಿ ದಂಡ ಪ್ರಯೋಗಕ್ಕೆ ಮಾತ್ರ ಅವಕಾಶ ಇರುವುದು ಗಮನಕ್ಕೆ ಬಂದಿದೆ. ಪರವಾನಗಿ ರದ್ದತಿ ಸೇರಿದಂತೆ ಹಲವು ಕಠಿಣ ಕ್ರಮದ ಬಗ್ಗೆ ಉಲ್ಲೇಖ ಇಲ್ಲ. ಈ ಮಧ್ಯೆ ಸಾವಿರಾರು ಆಟೋಗಳು ಆ್ಯಪ್‌ ಗಳಡಿ ಸೇವೆ ಸಲ್ಲಿಸುತ್ತಿವೆ. ನಿಯಮದಲ್ಲಿ ತ್ರಿಚಕ್ರ ವಾಹನಗಳ ಪ್ರಸ್ತಾಪ ಇಲ್ಲ. ಇಂತಹ ಹಲವು ಅಂಶಗಳ ಕುರಿತು ತಜ್ಞರು, ನಿವೃತ್ತ ಅಧಿಕಾರಿಗಳು, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ನಿಯಮಗಳ ಮಾರ್ಪಾಡಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ’ ಎಂದು ಸಾರಿಗೆ ಇಲಾಖೆ ಆಯುಕ್ತ ಟಿ.ಎಚ್‌.ಎಂ. ಕುಮಾರ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

“ಇಂತಿಷ್ಟೇ ಅವಧಿಯಲ್ಲಿ ಮಾರ್ಪಾಡುಗಳನ್ನು ಮಾಡಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳುವುದು ಕಷ್ಟ. ಆದರೆ, ನಿಗದಿತ ಅವಧಿಯಲ್ಲಿ ಇದನ್ನು ಮಾಡಲಾಗುವುದು. 2016ರಲ್ಲಿ ನಿಯಮ ರೂಪಿಸಿದ್ದು, ನಂತರದಲ್ಲಿ ಸಾಕಷ್ಟು ಬೆಳವಣಿಗೆಗಳೂ ಆಗಿವೆ. ಈ ಹಿನ್ನೆಲೆಯಲ್ಲಿ ಮಾರ್ಪಾಡಿನ ಅವಶ್ಯಕತೆಯೂ ಇದೆ’ ಎಂದು ಹೇಳಿದರು.

Advertisement

ಪ್ರಸ್ತುತ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಒಂದು ಆಟೋಗೆ 5 ಸಾವಿರ ರೂ. ಗಳಂತೆ ಕಂಪನಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. 10 ಸಾವಿರಕ್ಕೂ ಅಧಿಕ ಆಟೋಗಳು ಅಗ್ರಿಗೇಟರ್‌ ಕಂಪನಿಗಳೊಂದಿಗೆ ಜೋಡಣೆ ಮಾಡಿಕೊಂಡಿದ್ದು, ಸರ್ಕಾರವು ಈ ಆಟೋಗಳಿಗೆ ನಿಗದಿಪಡಿಸಿರುವ ದರ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಕಂಪನಿಗಳ ಮೇಲಿದೆ.

ಇತರೆ ವಾಹನಗಳಿಗೆ ಅವಕಾಶ?
ಕೇಂದ್ರ ಸರ್ಕಾರವು 2020ರ ನವೆಂಬರ್‌ನಲ್ಲಿ ಹೊರಡಿಸಿದ “ಮೋಟಾರು ವಾಹನ ಅಗ್ರಿಗೇಟರ್‌ ಮಾರ್ಗಸೂಚಿ-2020’ರಲ್ಲಿ ಕನಿಷ್ಠ ದರ 25-30 ರೂ. ದರ ನಿಗದಿಪಡಿಸಿ ಆಯಾ ರಾಜ್ಯಗಳ ಮಹಾನಗರಗಳಲ್ಲಿ ಅಗ್ರಿಗೇಟರ್‌ಗಳ ಮೂಲಕ ಸಾರಿಗೆ ಸೇವೆ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಕ್ಯಾಬ್‌ಗಳ ಜತೆಗೆ “ಇತರೆ ವಾಹನ’ಗಳಿಗೂ ಈ ದರವನ್ನು ಅನುಸರಿಸಬಹುದು ಎಂದೂ ಹೇಳಿದೆ. ಅಗ್ರಿಗೇಟರ್‌ ಕಂಪನಿಗಳು ಈ ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next