ಚಿಕ್ಕಬಳ್ಳಾಪುರ: ತಾಲೂಕು ಸೌಧ ನಿರ್ಮಾಣದ ಮಾದರಿಯಲ್ಲಿ ಗ್ರಾಮ ಆಡಳಿತ ಸೌಧ ನಿರ್ಮಾಣಕ್ಕೆ ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಈ ಸಂಬಂದ ಅಧ್ಯಯನ ನಡೆಸಿ ವರದಿ ನೀಡಲು ವಿಶೇಷ ಸಲಹಾ ಸಮಿತಿ ರಚಿಸಲಾಗಿದೆ.
ಗ್ರಾಪಂ ಅಧಿಕಾರಿಗಳು, ಸಿಬಂದಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಕೂಡ ಒಂದೇ ಕಚೇರಿ ವ್ಯಾಪ್ತಿಯಲ್ಲಿ ಸುಗಮವಾಗಿ ಕೆಲಸ ನಿರ್ವಹಣೆಗಾಗಿ ಅನುಕೂಲವಾಗುವಂತೆ ತಾಲೂಕು ಸೌಧ ಮಾದರಿಯಂತೆ ಗ್ರಾಮ ಆಡಳಿತ ಸೌಧ ನಿರ್ಮಾಣಕ್ಕೆ ಅಧ್ಯಯನ ನಡೆಸುವಂತೆ ಸಲಹಾ ಸಮಿತಿಗೆ ಸರಕಾರ ಸೂಚಿಸಿದೆ.
ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ಕ್ಷೇತ್ರದಂತೆ ಗ್ರಾಮ ಆಡಳಿತ ಅಧಿಕಾರಿಗಳಿಗೂ ಅವರ ಕಾರ್ಯ ಕ್ಷೇತ್ರ ವ್ಯಾಪ್ತಿಯ ಮರು ಹಂಚಿಕೆಯೊಂದಿಗೆ ಸಮನ್ವಯಿಸಿ ಕಾರ್ಯನಿರ್ವಹಣ ವರದಿ ನೀಡುವಂತೆಯು ಸಲಹಾ ಸಮಿತಿಗೆ ಸರಕಾರ ನಿರ್ದೇಶನ ನೀಡಿದೆ.
ವಿಶೇಷ ಸಲಹಾ ಸಮಿತಿಗೆ ಬೆಂಗಳೂರು ಪ್ರಾದೇಶಿಕ ಆಯುಕ್ತರನ್ನು ಸರಕಾರ ಅಧ್ಯಕ್ಷರನ್ನಾಗಿ ಹಾಗೂ ಕಲಬುರಗಿ, ಮೈಸೂರು, ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಸದಸ್ಯರನ್ನಾಗಿ ಮಾಡಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ವಿಭಾಗದ ಅಪರ ಪ್ರಾದೇಶಿಕ ಆಯುಕ್ತರನ್ನು ಸದ್ಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಉಳಿದಂತೆ ಮೈಸೂರು, ಬೆಳಗಾವಿ, ರಾಯಚೂರು ಹಾಗೂ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳನ್ನು ಸಹ ವಿಶೇಷ ಸಲಹಾ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.
ವಿಶೇಷವಾಗಿ ಕಂದಾಯ ಇಲಾಖೆಯಲ್ಲಿ ಸರಳತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದರ ಜತೆಗೆ ಕಂದಾಯ ಇಲಾಖೆ ನ್ಯಾಯಾಲಯದ ಪ್ರಕರಣಗಳನ್ನು ವಿಲೇವಾರಿ ಮಾಡಲು ಪರಿಷ್ಕೃತ ವೇಳಾಪಟ್ಟಿ ಸಿದ್ಧಪಡಿಸುವುದು, ಕಂದಾಯ ಇಲಾಖೆಯ ಅಧಿಕಾರಿ, ಸಿಬಂದಿಗೆ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ವಾರ್ಷಿಕ ಕಂದಾಯ ಪ್ರಶಸ್ತಿಗಳನ್ನು ನೀಡಲು ಮಾರ್ಗಸೂಚಿ ರೂಪಿಸುವುದು, ಕಂದಾಯ ಅಧಿಕಾರಿ, ಸಿಬಂದಿಗೆ ಆರಂಭಿಕ ತರಬೇತಿ, ಸೇವಾ ಅವಧಿಯಲ್ಲಿ ತರಬೇತಿ ಆಯೋಜನೆ, ಕಂದಾಯ ಇಲಾಖೆ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಗ್ರಾಮ ಆಡಳಿತಾಧಿಕಾರಿ, ದ್ವಿತೀಯ ದರ್ಜೆ ಸಹಾಯಕರ ವರ್ಗಾವಣೆ, ನಿಯೋಜನೆ, ಅನ್ಯ ಕರ್ತವ್ಯದ ಮೇರೆಗೆ ನೇಮಿಸುವ ಪ್ರಸ್ತಾವನೆಗಳ ಕುರಿತು ಒಂದು ನೀತಿ ರಚಿಸಿ ತಿಂಗಳೊಳಗೆ ವರದಿ ನೀಡುವಂತೆ ಸರಕಾರ ವಿಶೇಷ ಸಲಹಾ ಸಮಿತಿಗೆ ನಿರ್ದೇಶನ ನೀಡಿದೆ.
ಕಾಗತಿ ನಾಗರಾಜಪ್ಪ