Advertisement

ವನ್ಯ ಜೀವಿಗಳ ಸಂರಕ್ಷಣೆಗೆ ಸಹಕಾರ ಅಗತ್ಯ

12:37 PM Oct 29, 2017 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವು ವನ್ಯಜೀವಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವದಲ್ಲೇ ಖ್ಯಾತಿ ಪಡೆದಿದೆ ಎಂದು ವೀರನಹೊಸಹಳ್ಳಿ ವಲಯದ ಆರ್‌ಎಫ್ಒ ಮಧುಸೂಧನ್‌ ತಿಳಿಸಿದರು.

Advertisement

ಹುಣಸೂರು ತಾಲೂಕಿನ ಹನಗೋಡಿನಲ್ಲಿ ನಡೆದ ಮೈಸೂರು ವಿವಿಯ ಅಂತರ ಜಿಲ್ಲಾ ಮಟ್ಟದ ಎನ್‌ಎಸ್‌ಎಸ್‌ ಶಿಬಿರದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಮಾತನಾಡಿದರು. ನಾಗರಹೊಳೆ 643 ಚ.ಕಿ.ಮೀ ಇದ್ದು, 1972ರಲ್ಲಿ ವನ್ಯಜೀವಿ ಸಂರಕ್ಷಣೆ ಕಾಯ್ದೆ, 1973ರಲ್ಲಿ ಹುಲಿ ಸಂರಕ್ಷಣೆ ಯೋಜನೆಯು ಪ್ರಥಮವಾಗಿ ಬಂಡಿಪುರದಲ್ಲಿ ಆರಂಭಗೊಂಡಿತು. 2007ರಿಂದ ಕರ್ನಾಟಕವು ಹುಲಿ ಸಂರಕ್ಷಣೆ ಯೋಜನೆಯಲ್ಲಿ ಮೊದಲ ಸ್ಥಾನದಲ್ಲಿದೆ.

1017ರ ಗಣತಿಯಲ್ಲಿ ರಾಜ್ಯದಲ್ಲಿ 408 ಹುಲಿಗಳಿದ್ದರೆ, ನಾಗರಹೊಳೆ ಉದ್ಯಾನದಲ್ಲಿ 92 ಹುಲಿಗಳಿವೆ, ದೇಶದಲ್ಲಿನ 16 ಸಾವಿರ ಆನೆಗಳ ಪೈಕಿ ಕರ್ನಾಟಕದಲ್ಲಿ 6 ಸಾವಿರ ಆನೆಗಳಿವೆ, ಅಲ್ಲದೆ ಜಿಂಕೆ,ಕಡವೆ, ಕರಡಿ,ನವಿಲು,ಕಾಡೆಮ್ಮೆ ಸೇರಿದಂತೆ ಅನೇಕ ಪ್ರಾಣಿಗಳು, ಅಸಂಖ್ಯಾತ ವಿವಿಧ ಜಾತಿಯ ಪಕ್ಷಿಗಳು ಆಶ್ರಯ ಪಡೆದಿವೆ. ಹೀಗಾಗಿ ಇಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವೆಂದರು.

ಕಾಡ್ಗಿಚ್ಚು ಅಗತ್ಯ ಕ್ರಮ: ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ತಡೆಯಲು 24 ಗಂಟೆ ಸತತ ಕಾರ್ಯ ನಿರ್ವಹಿಸುವ ಬೆಂಕಿ ತಡೆ ತಂಡ, ಹಾಗೂ ವನ್ಯಜೀವಿಗಳ ಬಾಯಾರಿಕೆ ನೀಗಿಸಲು ಉದ್ಯಾನದ 19 ಕಡೆ ಸೋಲಾರ್‌ ಪಂಪ್‌ಸೆಟ್‌ ಅಳವಡಿಸಲಾಗಿದೆ. ಮಳೆ ಸಂದರ್ಭದಲ್ಲಿ ಕಾಡಿನ ನೀರು ಕೆರೆ ಸೇರುವಂತೆ ಕ್ರಮವಹಿಸಲಾಗಿದ್ದು, ಇತ್ತೀಚಿನ ಮಳೆಯಿಂದ ನಾಗರಹೊಳೆ ಹಸಿರಿನಿಂದ ಕಂಗೊಳಿಸುತ್ತಿದೆ. ಇನ್ನು ವನ್ಯಜೀವಿಗಳು ಸಂತೃಪ್ತಿಯಿಂದಿವೆ ಎಂದು ಬಣ್ಣಿಸಿದರು.

ಬೇಟೆಗೆ ಕಡಿವಾಣ ಹಾಕಿ: ಕಲ್ಲಹಳ್ಳಿ ವಲಯದ ಆರ್‌ಎಪ್‌ಒ ಶಿವರಾಮ್‌ ಕಾಡು ರಕ್ಷಣೆಯಲ್ಲಿ ನಾಗರಿಕರು ಇಲಾಖೆಯೊಂದಿಗೆ ಕೈ ಜೋಡಿಸಬೇಕು, ಪರಿಸರ ಸಮತೋಲನಕ್ಕಾಗಿ ಶೇ. 33 ರಷ್ಟು ಅರಣ್ಯ ಪ್ರದೇಶವಿರಬೇಕು, ಆದರೆ ಇಂದು ಶೇ.21 ರಷ್ಟು ಅರಣ್ಯ ಪ್ರದೇಶವಿದ್ದು, ಅರಣ್ಯ ಹೆಚ್ಚಿಸಲು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಜಾರಿಗೆ ತಂದಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕಿದೆ ಹಾಗೂ ವನ್ಯಜೀವಿ ಭೇಟೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

Advertisement

40 ಹಾವುಗಳು ಮಾತ್ರ ವಿಷಕಾರಿ: ಉರಗತಜ್ಞ ಬೆಂಗಳೂರಿನ ಮಹಮದ್‌ ಹನೀಸ್‌ ಮಾತನಾಡಿ, ಹಾವುಗಳ ಬಗ್ಗೆ ಜನರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ದೇಶದಲ್ಲಿ ಈವರೆಗೆ ಸುಮಾರು 250 ವಿವಿಧ ಜಾತಿಯ ಹಾವುಗಳಿದ್ದು, ಈ ಪೈಕಿ ನಾಗರಹಾವು, ಕಾಳಿಂಗಸರ್ಪ, ಮಂಡಲದಹಾವು, ಕಟ್ಟುಹಾವು, ರಕ್ತಮಂಡಲ ಸೇರಿದಂತೆ 35-40 ಹಾವುಗಳು ಮಾತ್ರ ವಿಷಕಾರಿಯಾಗಿವೆ,

ಹಾವು ಕಡಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅತೀ ಮುಖ್ಯ, ಹಾವು ಕಡಿತಕ್ಕೆ ಕೆಲ ಜ್ಯೋತಿಷಿಗಳು, ನಾಟಿ ವೆದ್ಯರು ಹಣಕ್ಕಾಗಿ ಔಷಧ ನೀಡುವ ಪದ್ಧತಿ ಸರಿಯಲ್ಲ, ಯಾವ ಹಾವು ಕಚ್ಚಿದೆ ಎಂಬುದನ್ನು ತಿಳಿದುಕೊಳ್ಳುವುದು ಒಳಿತು ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಹನಗೋಡು ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತರಾಯ, ಗ್ರಾಪಂ ಅಧ್ಯಕ್ಷ ಎಚ್‌.ಬಿ.ಮಧು, ತಾಪಂ ಸದಸ್ಯೆ ರೂಪಾ ನಂದೀಶ್‌, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಎನ್‌ಎಸ್‌ಎಸ್‌ ಸಲಹಾ ಸಮಿತಿ ಸದಸ್ಯ ಹನಗೋಡು ನಟರಾಜ್‌ ಮಾತನಾಡಿದರು. ಜಿಲ್ಲಾ ಎಸ್‌ಸಿ/ಎಸ್‌ಟಿ ಸಮಿತಿ ಸದಸ್ಯ ನೇರಳಕುಪ್ಪೆ$ಮಹದೇವ್‌, ದಾರಾ ಮಹೇಶ್‌ ಸೇರಿದಂತೆ ಅನೇಕರಿದ್ದರು.

ಎತ್ತಿನಗಾಡಿಯಲ್ಲಿ ಸ್ವಾಗತ: ಕಾರ್ಯಕ್ರಮಕ್ಕಾಗಮಿಸಿದ ಅತಿಥಿಗಳನ್ನು ಶಿಬಿರಾರ್ಥಿಗಳನ್ನು ಎತ್ತಿನಗಾಡಿ ಮೂಲಕ ಹಾಗೂ ಪೂರ್ಣಕುಂಭ ಸ್ವಾಗತ ನೀಡಿ ವೇದಿಕೆಗೆ ಕರೆತಂದದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next