Advertisement

Belthangady ಸಂಸ್ಕೃತಿ ಸಂರಕ್ಷಣೆಯೆಡೆಗೆ 130 ಸಸ್ಯಪ್ರಭೇದಗಳ ಸಂರಕ್ಷಣೆ

01:20 AM May 14, 2024 | Team Udayavani |

ಬೆಳ್ತಂಗಡಿ: ಪರಶುರಾಮ ಸೃಷ್ಟಿಯ ನಾಡಿನಲ್ಲಿ ಸಹ್ಯಾದ್ರಿಯ ಮಡಿಲಲ್ಲಿ ಇಂದು ಸಂಸ್ಕೃತಿ ಸಂರಕ್ಷಣೆಯ ಸಸ್ಯಪ್ರಭೇದ ಗಳು ನಶಿಸುತ್ತಿವೆ. ಈ ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಲಾೖಲ ಬಜಕಿರೆ ಸಾಲು ಕೃಷಿಕರೋರ್ವರು ಹೋಮ ಹವನ ಸಹಿತ ದೈನಂದಿನ ಧಾರ್ಮಿಕ ಕಾರ್ಯಗಳಲ್ಲಿ ಬಳಸಬಹುದಾದ 130 ಸಸ್ಯಪ್ರಭೇದದ ಗಿಡಗಳನ್ನು ಸಂರಕ್ಷಿಸುವ ಸಲುವಾಗಿ ಮಿಯಾವಾಕಿ ಮಾದರಿ ಚಿತ್ಪಾವನ ವೇದವನವನ್ನೇ ಮರುಸೃಷ್ಟಿಸಿದ್ದಾರೆ.

Advertisement

ಚಿತ್ಪಾವನ ವನದ ವಿಶೇಷತೆ
ಇಲ್ಲಿನ ಕೃಷಿಕ ಯೋಗೀಶ್‌ ಭಿಡೆ ಅವರ ಕೃಷಿ ಪ್ರದೇಶದಲ್ಲಿ ಸಸ್ಯಶಾಸ್ತ್ರಜ್ಞ ಗಣೇಶ್‌ ಶೆಂಡ್ಯೆ ಅವರ ಯೋಜನೆಯಂತೆ ಪಾರಂಪರಿಕ ಸಸ್ಯಪ್ರಭೇದದ ಉಳಿವಿಗಾಗಿ ಈ ಪ್ರಯೋಗಶೀಲತೆಗೆ ಮುಂದಾಗಿದ್ದಾರೆ. ಈ ವನವು ಚಿತ್ಪಾವನ (ಚಿತ್‌-ಅರಿವು, ಪಾ-ರಕ್ಷಣೆ, ವನ-ಅರಣ್ಯ) ಅರಣ್ಯವಾಗಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಿ ಸಲ್ಪಡುವ ಸಸ್ಯಗಳನ್ನು ಇಲ್ಲಿ ನೆಡಲಾಗಿದೆ. ಅವುಗಳಿಗೆ ವೇದವನ ಎಂದೂ ಹೆಸರಿಸಲಾಗಿದೆ.

ಉದ್ದೇಶ ಮತ್ತು ಆಶಯ
ಮನೆಗಳಲ್ಲಿ ದಿನಂಪ್ರತಿ ನಡೆಯುವ ಕುಲದೇವರ ಪಂಚಾಯತನ (ಸಹಿತ/ರಹಿತ) ಪೂಜೆಯಲ್ಲದೇ, ಕುಟುಂಬದ ಸದಸ್ಯರಿಗೆ ನಡೆಯುವ ಷೋಡಶ ಸಂಸ್ಕಾರಗಳು, ಹೋಮ ಹವನಗಳುಳ್ಳ ದೇವತಾ ಕಾರ್ಯಗಳು, ಋತುಧರ್ಮದ ಪ್ರಕಾರ ನಡೆಯುವ ವ್ರತ, ವಾಯನ ಅಡುಗೆ ಮುಂತಾದ ವಿಶಿಷ್ಟ ಆಚರಣೆಗಳಲ್ಲಿ ಎಲೆ, ಪುಷ್ಪ, ಹಣ್ಣು, ಸಮಿಧೆ ಮುಂತಾದ ರೂಪದಲ್ಲಿ ಉಪಯೋಗಿಸಲ್ಪಡುತ್ತದೆ. ಆದರೆಇತ್ತೀಚೆಗೆ ಇದರ ಅಲಭ್ಯತೆ ಯಿದೆ. ಈ ಅಂಶಗಳನ್ನು ಗಮನಿಸಿಕೊಂಡು ಸುಮಾರು 130 ಪ್ರಭೇದಗಳ ಸಸ್ಯಗಳನ್ನು ಈ ವನದಲ್ಲಿ ಬೆಳೆಸಲಾಗುತ್ತಿದೆ. ಲಭ್ಯ ಸ್ಥಳೀಯ ಸಾವಯವ ಸಾಮಗ್ರಿಗಳ ಸಹಾಯದಿಂದ ಬಹು-ಸ್ತರೀಯ (Stratification) ಮಾದರಿಗನುಗುಣವಾಗಿ ವನ ವನ್ನು ನಿರ್ಮಿಸಲಾಗುತ್ತಿದೆ.

ವೇದವನದಲ್ಲಿರುವ ಸಸ್ಯಪ್ರಭೇದ
ಅಗರು, ಅಗಸ್ತ, ಅಡ್ಕಬಾಳೆ, ಅರಸಿನ, ಅರ್ಜುನ, ಅಶೋಕ, ಅಶ್ವತ್ಥ, ಅಳಲೆ, ಆನೆಮುಂಗು, ಇಂಗು, ಉತ್ತರಣೆ, ಉದ್ದು, ಎಳ್ಳು, ಏಲಕ್ಕಿ, ಉಯೆರ್‌ (ತುಳು), ಕಂಚುಹುಳಿ (ಜಾಂಬೀರ), ಕಚೂರಗಂಧ, ಕದಂಬ, ಕಮಲ, ಕಲ್ಹಾರ, ಕಹಿಬೇವು, ಕಾಮಕಸ್ತೂರಿ, ಕೇದಗೆ, ಕೇಪಳ ಹೂವು, ಕೊಟ್ಟೆಹಣ್ಣು, ಖದಿರ, ಗಟ್ಟದ ತುಂಬೆ, ತುಂಬೆ ಗಿಡ, ಬಿಲ್ವ, ಬಿಳಿ ಕಡ್ವಿ ಸೇರಿದಂತೆ 130 ಸಸ್ಯಪ್ರಭೇದಗಳಿವೆ.

ಈ ಯೋಜನೆಯಲ್ಲಿ ರೂಪುಗೊಂಡಿರುವ ಅರಣ್ಯ, ಚಿತ್ಪಾವನರ ಕುಲಗುರುಗಳಾದ ಪರಶುರಾಮ ಸೃಷ್ಟಿಯ ಸ್ವಾಭಾವಿಕ ಮಳೆಕಾಡು ಗಳ ತದ್ರೂಪಿಯಾಗಬೇಕು. ನಮ್ಮ ಸಂಸ್ಕೃತಿಯಲ್ಲಿ ಬಳಸುವ ಸಸ್ಯಗಳ
ಜೀವಂತ ಖಜಾನೆಯಾಗಬೇಕು. ಇಂತಹ ಸ್ಥಳಗಳ ನಿರ್ಮಾಣ ಮಾಡಲು ಆಸಕ್ತರಿಗೊಂದು ಅಧ್ಯಯನ ಕ್ಷೇತ್ರವಾಗಬೇಕು. ಕೇವಲ ಒಂದು ಸಮುದಾಯದ ಭಾಗವಾಗದೇ ಪ್ರಕೃತಿ ತತ್ವದ ಅನಾವರಣ ಮಾಡಲು ಮಾನವನ ಪಾತ್ರವನ್ನು ಅನುಭವಜನ್ಯ ಪಾಠವಾಗಿ ತಿಳಿಸಿಕೊಡುವ ಸ್ಥಳವಾಗಬೇಕು ಎನ್ನುವ ನಿರೀಕ್ಷೆ ನಮ್ಮದಾಗಿದೆ.
-ಗಣೇಶ ವಿ. ಶೆಂಡ್ಯೆ
ಚಿತ್ಪಾವನ ಅರಣ್ಯ ವಿನ್ಯಾಸಕರು ಮತ್ತು ಸಸ್ಯಶಾಸ್ತ್ರಜ್ಞರು, ಉಜಿರೆ

Advertisement

ನಮ್ಮ ಆಚರಣೆಗೆ ಅನುಗುಣವಾಗಿ ಹಿರಿಯರ ಬಳವಳಿಯಾಗಿ ಬಂದ ಸಂಸ್ಕೃತಿಯನ್ನು ಮುಂದಿನ ಸಮಾಜಕ್ಕೆ ದಾಟಿಸುವ ಉದ್ದೇಶ ನಮ್ಮದಾಗಿದೆ. ಅನೇಕ ಆಚರಣೆಗಳಿಗೆ ಇಂದು ಸಸ್ಯ, ಹೂಗಳ ಅಲಭ್ಯತೆಯಿದೆ. ಈ ನೆಲೆಯಲ್ಲಿ ಇದೇ ಮಾದರಿಯಲ್ಲಿ ದೈವಸ್ಥಾನ ಮತ್ತು ಭಜನ ಮಂದಿರಗಳ ಬಳಿ ವೇದವನಗಳನ್ನು ಸಂಸ್ಕೃತಿ ಮತ್ತು ಪವಿತ್ರತೆಯ ಭಾಗವಾಗಿ ಬೆಳೆಸುವ ಪ್ರಯತ್ನವಾಗಲಿ ಎಂಬುದು ನಮ್ಮ ಆಶಯವಾಗಿದೆ.
-ಯೋಗೀಶ್‌ ಭಿಡೆ, ಕೃಷಿಕ, ಚಿತ್ಪಾವನ ವೇದವನದ ನಿರ್ಮಾತೃ

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next