Advertisement

ರಸ್ತೆ ಅಗಲೀಕರಣಕ್ಕೆ ಆಸ್ತಿ ಮಾಲೀಕರ ಒಪ್ಪಿಗೆ

04:13 PM Aug 07, 2022 | Team Udayavani |

ಆಳಂದ: ಪಟ್ಟಣದ ಪುರಸಭೆಯಿಂದ ದರ್ಗಾ ಕ್ರಾಸ್‌ ವರೆಗಿನ ಮುಖ್ಯರಸ್ತೆ ಅಗಲೀಕರಣ ಕೈಗೊಳ್ಳುವ ಹಿನ್ನೆಲೆಯಲ್ಲಿ ಶಾಸಕ ಸುಭಾಷ ಗುತ್ತೇದಾರ ಅಧ್ಯಕ್ಷತೆಯಲ್ಲಿ ಪಟ್ಟಣದಲ್ಲಿ ಕರೆದ ಆಸ್ತಿ ಮಾಲೀಕರ ಸಭೆಯಲ್ಲಿ ರಸ್ತೆ ಮಧ್ಯಭಾಗದಿಂದ ತಲಾ 20ಅಡಿ ಅಗಲೀಕರಣಕ್ಕೆ ಒಪ್ಪಿಗೆ ದೊರೆಯಿತು. ಕೆಲವರು ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಕ್ಕೆ ಶಾಸಕರು ಇದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

Advertisement

ಈ ಹಿಂದೆ ಕರೆದ ಸಭೆಯಲ್ಲಿ ರಸ್ತೆ ಮಧ್ಯಭಾಗದಿಂದ 25ಅಡಿಗೆ ಬಹುತೇಕರು ಒಪ್ಪಿಗೆ ಸೂಚಿಸಿದ್ದರು. ಆ ನಂತರ ನಡೆದ ಸಭೆಯಲ್ಲಿ ಮಧ್ಯಭಾಗದಿಂದ ತಲಾ 20ಅಡಿ ಅಗಲೀಕರಣಕ್ಕೆ ಮಾತ್ರ ಸಹಮತ ವ್ಯಕ್ತವಾಯಿತು.

ಸಭೆಗೆ ಆಗಮಿಸಿದ್ದ ಆಸ್ತಿಗೆ ಸಂಬಂಧಿತರ ಕುಟುಂಬದ ಕೆಲವು ಸದಸ್ಯರು, 20ಅಡಿ ಅಗಲೀಕರಣದಿಂದ ಸಂಪೂರ್ಣ ಮನೆಯನ್ನೇ ಕಳೆದುಕೊಳ್ಳುತ್ತೇವೆ. ತಲಾ 15ಅಡಿ ಮಾತ್ರ ಅಗಲೀಕರಣ ಕೈಗೊಳ್ಳಬೇಕು. ಅಲ್ಲದೇ ನಮಗೆ ಪರಿಹಾರ ನೀಡಿ ಅಗಲೀಕರಣ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಸುಭಾಷ ಗುತ್ತೇದಾರ, ಅಭಿವೃದ್ಧಿ ಕಾರ್ಯಕ್ಕೆ ಮುಖ್ಯಮಂತ್ರಿ ನಿಧಿಯಿಂದ ಬಂದ 50ಕೋಟಿ ರೂ. ಅನುದಾನದಲ್ಲಿ ಪಟ್ಟಣದ ರಸ್ತೆ ಅಗಲೀಕರಣಕ್ಕೆ 11ಕೋಟಿ ರೂ. ಮೀಸಲಿಟ್ಟಿದ್ದೇನೆ. ರಸ್ತೆ ಮಧ್ಯಭಾಗದಿಂದ ತಲಾ 25ಅಡಿ ಅಗಲೀಕರಣ ನಿರ್ಣಯವಾಗಿದ್ದರಿಂದ ಟೆಂಡರ್‌ ಹಂತದಲ್ಲಿದೆ. ಈಗಾಗಲೇ ಪುರಸಭೆಯಿಂದ ಅಗಲೀಕರಣದ ಸರ್ವೇ ನಡೆಸಿ ಮಾರ್ಕ್‌ ಮಾಡಲಾಗಿದೆ. ಇದಕ್ಕೆ ಆಸ್ತಿ ಮಾಲೀಕರ ಒಪ್ಪಿಗೆ ಇದೆಯೋ ಇಲ್ಲವೋ ತಿಳಿಸಬೇಕು. ಇಲ್ಲದಿದ್ದರೆ ಎಷ್ಟು ಅಡಿ ಅಗಲೀಕರಣವಾಗಬೇಕು ಎನ್ನುವುದನ್ನಾದರೂ ತಿಳಿಸಬೇಕು ಎಂದರು.

ಹಿಂದೆ ರಜ್ವಿರೋಡ ಅಗಲೀಕರಣದಲ್ಲೂ ಯಾರಿಗೂ ಪರಿಹಾರ ಕೊಟ್ಟಿಲ್ಲ. ಮುಖ್ಯ ರಸ್ತೆ ಅಗಲೀಕರಣದಲ್ಲೂ ಪರಿಹಾರದ ಕುರಿತು ಪ್ರಸ್ತಾಪವಿಲ್ಲ ಎಂದು ತಿಳಿಸಿದರು.

Advertisement

ಭಿನ್ನಾಭಿಪ್ರಾಯ: ನಾಗರಿಕ ಮುಖಂಡ ರವಿಂದ್ರ ಕೊರಳ್ಳಿ ಮಾತನಾಡಿ, ಟೌನ್‌ ಪ್ಲ್ಯಾನ್‌ ಮಾಡಿದ ಬಗ್ಗೆ ನಕ್ಷೆ ನೀಡಿ. ರಸ್ತೆ ಅಗಲೀಕರಣದಿಂದ ಸಾಕಷ್ಟು ಜನರು ಆಸ್ತಿ ಕಳೆದುಕೊಂಡು ಬೀದಿಪಾಲಾಗುತ್ತಾರೆ. ಆದ್ದರಿಂದ ಕಾನೂನಿನಂತೆ ಎಲ್ಲರಿಗೂ ಪರಿಹಾರ ಕಲ್ಪಿಸಬೇಕು ಎಂದು ಕೋರಿದರು.

ಯುವಕ ಸಂತೋಷ ವಾಲಿ ಮಾತನಾಡಿ, ಅಭಿವೃದ್ಧಿಗೆ ನಮ್ಮ ಒಪ್ಪಿಗೆ ಇದೆ. ಅದೇ ರೀತಿ ಪರಿಹಾರ ದೊರೆಯುವಂತಾಗಲಿ. ಮಧ್ಯಭಾಗದಿಂದ 20ಅಡಿ ಅಗಕಲೀಕರಣ ನಡೆಯಲಿ ಎಂದರು. ಚಿತಲಿ ಪಾಟೀಲ ಅವರು ತಲಾ 15ಅಡಿ ಮಾತ್ರ ಅಗಲೀಕರಣ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರೇಡ್‌-2 ತಹಶೀಲ್ದಾರ್‌ ಬಸವರಾಜ ರಕ್ಕಸಗಿ, ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಜೆಸ್ಕಾಂ ಎಇಇ ಮಾಣಿಕರಾವ್‌ ಕುಲಕರ್ಣಿ, ಪಿಎಸ್‌ಐ ತಿರುಮಲ್ಲೇಶ ಕುಂಬಾರ ಹಾಗೂ ಮುಖ್ಯ ರಸ್ತೆಯಲ್ಲಿರುವ ಆಸ್ತಿಗಳ ಮಾಲೀಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next