Advertisement

ಅಂತಃಸತ್ವ ಜಾಗೃತಗೊಳಿಸುವ ಪ್ರಜ್ಞೆ ಅಗತ್ಯ: ಮುರುಘಾ ಶ್ರೀ

06:28 PM Aug 09, 2022 | Team Udayavani |

ಚಿತ್ರದುರ್ಗ: ಮಾನವನನ್ನು ಕಲುಷಿತಗೊಳಿಸುವ ಪ್ರಜ್ಞೆಗಳು ಬಹಳಷ್ಟಿವೆ. ಮಾನವನ ಅಂತಃಸತ್ವವನ್ನು ಜಾಗೃತಗೊಳಿಸುವ ಪ್ರಜ್ಞೆಯ ಅಗತ್ಯವಿದ್ದು, ಅದೇ ಅಂತಃಸಾಕ್ಷಿ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಇಲ್ಲಿನ ನೆಹರೂ ನಗರದ ಜ್ಞಾನವಿಕಾಸ ಶಾಲೆಯಲ್ಲಿ ನಡೆದ “ನಿತ್ಯ ಕಲ್ಯಾಣ; ಮನೆ ಮನೆಗೆ’ ಚಿಂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಕ್ಷಿಪ್ರಜ್ಞೆ ಎಂದರೆ ಅಂತಃಪ್ರಜ್ಞೆ. ಯಾವ ವ್ಯಕ್ತಿ ಶರೀರದ ಮೂಲಕ, ಬುದ್ಧಿಯ ಮೂಲಕ ಅವಲೋಕನದ ಮೂಲಕ ಆಯಾಮ, ಆಲೋಚನೆ, ಚಿಂತನೆಯನ್ನು ಸಾಕ್ಷೀಕರಣಗೊಳಿಸಬಹುದು.

ಆಗ ನಮ್ಮೊಳಗೆ ಸಾಕ್ಷೀಕರಣಗೊಳ್ಳುತ್ತದೆ. ಒಳಜ್ಞಾನವೇ ನಿಜವಾದ ಸಾಕ್ಷಾತ್ಕಾರ. ಪ್ರಜ್ಞೆಯ ಮೂಲಕ ಸಾಕ್ಷಾತ್ಕಾರವಾಗಬೇಕು. ಆಗ ದರ್ಶನವಾಗುತ್ತದೆ ಎಂದರು.

ಮಾನವ ಜೀವನದಲ್ಲಿ ಸುಖ ಬಿಂದುವಾಗಿದೆ, ದುಃಖ ಸಿಂಧುವಾಗಿದೆ. ಕ್ಷಣಿಕ ಸುಖಕ್ಕಾಗಿ ಆತ ಸಾಗರದಷ್ಟು ದುಃಖ ಅನುಭವಿಸಬೇಕಾಗುತ್ತದೆ. ಜೀವನ ಕೇವಲ ಸುಖ, ದುಃಖ ಮಾತ್ರವಲ್ಲ, ಸುಖ-ದುಃಖಗಳ ಸಂಗಮ. ಶಾಶ್ವತವಾದ ಸುಖವನ್ನು ಅಧ್ಯಾತ್ಮದಲ್ಲಿ ಕಾಣಬಹುದು. ನಿತ್ಯ ಕಲ್ಯಾಣ ದುಃ ಖವನ್ನು ಮರೆಸುತ್ತದೆ. ಅನುಭವ ವಿಸ್ತಾರವಾದರೆ ಬದುಕಿನ ವಿಸ್ತಾರವಾಗುತ್ತದೆ ಎಂದು ತಿಳಿಸಿದರು.

ಸಮ್ಮುಖ ವಹಿಸಿದ್ದ ತಿಳುವಳ್ಳಿ ಕಲ್ಮಠದ ಶ್ರೀ ಬಸವ ನಿರಂಜನ ಸ್ವಾಮೀಜಿ ಮಾತನಾಡಿ, ಶ್ರವಣ, ಮನನ, ಧ್ಯಾನ ಮೊದಲಾದವುಗಳನ್ನು ಶ್ರಾವಣ ಮಾಸದಲ್ಲಿ ಕೇಳಬೇಕು. ಸಾಕ್ಷಿಪ್ರಜ್ಞೆ ಅಂದರೆ ಸ್ವಯಂಅರಿವು. ತನ್ನನ್ನು ತಾನು ಮರೆಯದಿರುವುದು. ಸಾಕ್ಷಿಪ್ರಜ್ಞೆಗೆ ಒಳಗಾದವರು ಸುಖೀಜೀವಿಗಳಾಗುತ್ತಾರೆ. ಕೆಲವರಿಗೆ ಸ್ವಯಂ ಅರಿವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

Advertisement

ಪ್ರೊ| ಎಂ. ಲಿಂಗಪ್ಪ ಮಾತನಾಡಿ, ಮುರುಘಾ ಶರಣರು ಬುದ್ಧತ್ವ, ಬಸವತ್ವ ಹಾಗೂ ದಲಿತತ್ವವನ್ನು ನಿರಂತರವಾಗಿ ಪ್ರತಿಪಾದಿಸುತ್ತ ಬಂದಿದ್ದಾರೆ. ಮುರುಘಾ ಮಠದಲ್ಲಿ ತುಳಿತಕ್ಕೆ ಒಳಗಾದವರಿಗೆ ಅವಕಾಶ ಮಾಡಿಕೊಟ್ಟರು. ಸಮಾಜ ನಿಂತ ನೀರಲ್ಲ, ಅದು ಬದಲಾವಣೆ ಬಯಸುತ್ತದೆ. ಅನುಭಾವಿ ವಚನಕಾರರನ್ನು ಸೃಷ್ಟಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ನಗರಸಭೆ ಸದಸ್ಯ ಡಿ. ಮಲ್ಲಿಕಾರ್ಜುನ್‌ ಮಾತನಾಡಿ, ಮುರುಘಾ ಶರಣರು ಮೂಢನಂಬಿಕೆ ಹೋಗಲಾಡಿಸಲು ಅನೇಕ ಜನಮುಖೀ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ದೀನ ದಲಿತರಿಗೆ ಆಶ್ರಯ ನೀಡಿದ್ದಾರೆ ಎಂದರು. ನಗರಸಭೆ ಮಾಜಿ ಅಧ್ಯಕ್ಷ ಎಚ್‌. ಮಂಜಪ್ಪ ವೇದಿಕೆಯಲ್ಲಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ರುದ್ರಪ್ಪ ಸ್ವಾಗತಿಸಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next