Advertisement

“ಸ್ವಚ್ಛತೆಯ ಸಾಮಾಜಿಕ ಜಾಗೃತಿಗೆ ಪ್ರಜ್ಞೆ ಅಗತ್ಯ’

11:42 PM Jul 12, 2019 | Team Udayavani |

ಮಹಾನಗರ: ಮನೆ, ಪರಿಸರದ ಸ್ವಚ್ಛತೆ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಿಕೊಂಡರೆ ಮಂಗಳೂರು ನಗರ ಖಂಡಿತಾ ಸ್ವಚ್ಛ ನಗರವಾಗಿ ರೂಪು ಗೊಳ್ಳುತ್ತದೆ. ಸ್ವಚ್ಛತೆಯ ಕುರಿತು ಸಾಮಾಜಿಕ ಜಾಗೃತಿ ಪ್ರಜ್ಞೆ ನಮ್ಮದಾಗಬೇಕು ಎಂದು ರಾಮಕೃಷ್ಣ ಮಿಷನ್‌ ಸ್ವಚ್ಛ ಮಂಗಳೂರು ಅಭಿಯಾನ ಸಂಚಾಲಕ ಶ್ರೀ ಏಕಗಮ್ಯಾನಂದ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.

Advertisement

ಕೊಡಿಯಾಲಬೈಲ್‌ ಟಿಎಂಎ ಪೈ ಕನ್ವೆನ್ಶನ್‌ ಹಾಲ್‌ನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಅವರು ಶುಕ್ರವಾರ ಉದ್ಘಾಟಿಸಿದರು. ಬಹುತೇಕರು ಕರೆ ಮಾಡಿ ಸ್ವಚ್ಛ ಮಂಗಳೂರು ಅಭಿಯಾನ ಮಾಡುತ್ತಿರುವುದಕ್ಕೆ ಗೌರವ ಸಮ್ಮಾನ ಮಾಡುವ ಮಾತನ್ನಾಡುತ್ತಾರೆ. ಆದರೆ, ಅವರು ನಮ್ಮೊಂದಿಗೆ ಕೈ ಜೋಡಿಸಿ ಸ್ವತ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಂಡರೆ ಅದೇ ನಮಗೆ ಗೌರವ ಸಮ್ಮಾನ. ಸ್ವಚ್ಛತೆಯ ಕುರಿತು ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು. ಆಡಳಿತವೂ ಹೆಚ್ಚು ಮುತು ವರ್ಜಿ ವಹಿಸಿದರೆ ಮಂಗಳೂರು ಸ್ವಚ್ಛ ನಗರವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ವೃಕ್ಷಮಾತೆ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ, ಕರ್ನಾಟಕ ರಾಜ್ಯ ವಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಪಿಯೂಸ್‌ ಎಲ್‌. ರೊಡ್ರಿಗಸ್‌, ಹನುಮ ಗೌಡ ಮರಕಲ್‌, ಪರಿಸರ ಅಧಿಕಾರಿ ರಾಜಶೇಖರ್‌ ಪುರಾಣಿಕ್‌, ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ವಿ. ಕರಿಕ್ಕಳನ್‌, ಮಂಗಳೂರು ಸ್ಮಾರ್ಟ್‌ ಸಿಟಿ ಸಮಿತಿ ಮ್ಯಾನೇಜಿಂಗ್‌ ಡೈರೆಕ್ಟರ್‌ ನಾರಾಯಣಪ್ಪ, ಜಂಟಿ ನಿರ್ದೇಶಕ ನಾಗರಾಜ್‌, ಕೆನರಾ ಸಣ್ಣ ಕೈಗಾರಿಕಾ ಸಂಘದ ಕಾರ್ಯದರ್ಶಿ ಅಜಿತ್‌ ಕಾಮತ್‌, ಪ್ರಾಧ್ಯಾಪಕ ಡಾ| ಬಿ. ಶ್ರೀನಿಕೇತನ್‌ ಮುಖ್ಯ ಅತಿಥಿಗಳಾಗಿದ್ದರು.

10 ಸಾವಿರ ಗಿಡ ನೆಡುವ ಯೋಜನೆಗೆ ಚಾಲನೆ
ಸ್ಮಾರ್ಟ್‌ ಸಿಟಿ ವತಿಯಿಂದ ನಗರದಲ್ಲಿ 10 ಸಾವಿರ ಗಿಡ ನೆಡುವ “ವನ್‌ ಸ್ಮಾರ್ಟ್‌ ಸಿಟಿ ವನ್‌ ಇಂಪ್ಯಾಕ್ಟ್’ ಯೋಜನೆಗೆ ಚಾಲನೆ ನೀಡಲಾಯಿತು. ರೋಟರಿ ಮಂಗಳೂರು ಹಿಲ್‌ಸೈಡ್‌, ಕೆಎಸ್‌ಪಿಸಿಬಿ, ಕೆಎಸ್‌ಐಎ ಮತ್ತು ಒನ್‌ ಅರ್ಥ್ ಎನ್ವಿರೋಲ್ಯಾಬ್‌ ಅವರಿಂದ ನಗರದಲ್ಲಿ ವಾಯು ಗುಣಮಟ್ಟ ಅಳೆಯುವ ಮಾಪನ ಯೋಜನೆಯನ್ನು ಉದ್ಘಾಟಿಸಲಾಯಿತು. ಬಳಿಕ ಜಿಲ್ಲಾ ಪರಿಸರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಹಸಿರೀಕರಣ ಹಾಗೂ ಸ್ವತ್ಛ ಮಂಗಳೂರು ಅಭಿಯಾನ ಕಾರ್ಯಕ್ಕಾಗಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಹಾಗೂ ಶ್ರೀ ಏಕಗಮ್ಯಾನಂದ ಸ್ವಾಮೀಜಿಯವರಿಗೆ ಗೌರವ ಸಮ್ಮಾನ ಕಾರ್ಯಕ್ರಮ ಜರಗಿತು. ಆರ್‌ಜೆ ಪ್ರಸನ್ನ ಅವರು ಕಾರ್ಯ ಕ್ರಮ ನಿರೂಪಿಸಿದರು.

ದ.ಕ. ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಮಂಗಳೂರು ಸ್ಮಾರ್ಟ್‌ ಸಿಟಿ, ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ದ.ಕ. ಜಿಲ್ಲಾ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

Advertisement

ಜಾಥಾಕ್ಕೆ ಚಾಲನೆ
ಸಭಾ ಕಾರ್ಯಕ್ರಮಕ್ಕೂ ಮುನ್ನ ಮಂಗಳಾ ಕ್ರೀಡಾಂಗಣದಿಂದ ಸಭಾಂಗಣದವರೆಗೆ ಪರಿಸರ ಜಾಥಾ ಜರಗಿತು. ದ.ಕ. ಜಿಲ್ಲಾ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರಲೀಧರ ಪೈ ಬಿ., ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಎ.ಜಿ. ಗಂಗಾಧರ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next