ಶಿಲ್ಲಾಂಗ್: ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂಬ ಭವಿಷ್ಯ ನಿಜವಾಗಿದೆ. ಸದ್ಯದ ಟ್ರೆಂಡ್ ಪ್ರಕಾರ ಮೇಘಾಲಯದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಗುರುವಾರ (ಮಾರ್ಚ್ 02) ಬಿಗಿ ಭದ್ರತೆಯ ನಡುವೆ ಮತಎಣಿಕೆ ನಡೆಯುತ್ತಿದ್ದು, ಇನ್ನಷ್ಟೇ ಪೂರ್ಣ ಫಲಿತಾಂಶ ಹೊರಬೀಳಬೇಕಾಗಿದೆ.
ಇದನ್ನೂ ಓದಿ:ವೃದ್ಧಾಶ್ರಮದಲ್ಲಿ ಹುಟ್ಟಿದ ಪ್ರೇಮ: 70ರ ವೃದ್ಧೆ ಜೊತೆ ದಾಂಪತ್ಯಕ್ಕೆ ಕಾಲಿಟ್ಟ 75ರ ವೃದ್ಧ
60 ಸದಸ್ಯಬಲದ ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೋರ್ನಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಕ್ಷ(ಎನ್ ಪಿಪಿ) 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮೇಘಾಲಯ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 31 ಸ್ಥಾನಗಳ ಅಗತ್ಯವಿದೆ.
ಇನ್ನುಳಿದಂತೆ ಮೇಘಾಲಯ ವಿಧಾನಸಭಾ ಚುನಾವಣೆಯ ಮತಎಣಿಕೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಕ್ಷ (ಯುಡಿಪಿ) ಒಂಬತ್ತು ಸ್ಥಾನಗಳಲ್ಲಿ, ಬಿಜೆಪಿ 04, ಕಾಂಗ್ರೆಸ್ 04 ಹಾಗೂ ತೃಣಮೂಲ ಕಾಂಗ್ರೆಸ್ 07 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿ ತಿಳಿಸಿದೆ.
ಚುನಾವಣೆಗೂ ಮುನ್ನವೇ ಸಿಎಂ ಸಂಗ್ಮಾ ಭಾರತೀಯ ಜನತಾ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಪರೋಕ್ಷವಾಗಿ ಸುಳಿವು ನೀಡಿದ್ದರು. ಆ ನಿಟ್ಟಿನಲ್ಲಿ ತಾನು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಾಗಿ ಚುನಾವಣೆ ಪ್ರಚಾರದ ವೇಳೆ ತಿಳಿಸಿದ್ದರು.
2018ರಲ್ಲಿ ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿದ್ದು, ಈ ಬಾರಿ ಆರು ಸ್ಥಾನಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿತ್ತು.