ಬೆಳಗಾವಿ: ಕಿತ್ತೂರ ಕಲ್ಯಾಣ ಕರ್ನಾಟಕದ ರೈಲು ಮಾರ್ಗ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಅನುಮೋದನೆ ತಂದು ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಲೋಕಸತ್ತಾ ಪಕ್ಷದ ಮುಖಂಡರು ಶನಿವಾರ ಸಂಸದ ಸುರೇಶ ಅಂಗಡಿಗೆ ಮನವಿ ಸಲ್ಲಿಸಿದರು.
ಬೇಡಿಕೆಗೆ ಅನುಗುಣವಾಗಿ ರೈಲು ಮಾರ್ಗಗಳು ಇರದೇ ಇರುವುದರಿಂದ ಉತ್ತರ ಕರ್ನಾಟಕ ಭಾಗ ಅರ್ಥಿಕವಾಗಿ ಹಿಂದುಳಿದಿದೆ. ಅಭಿವೃದ್ಧಿ ಕಾರ್ಯಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೊಸ ಹೊಸ ರೈಲು ಯೋಜನೆಗಳು ಈ ಭಾಗಕ್ಕೆ ಸಿಗುತ್ತಿಲ್ಲ ಎಂದು ಪಕ್ಷದ ಮುಖಂಡರು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಈಗ ನಿರ್ಮಾಣ ಹಂತದಲ್ಲಿರುವ ಕುಡಚಿ-ಬಾಗಲಕೋಟೆ ಹಾಗೂ ಗದಗ- ವಾಡಿ ರೈಲು ಮಾರ್ಗಗಳು ಈ ಭಾಗಕ್ಕೆ ತಕ್ಕ ಮಟ್ಟಿಗೆ ಪ್ರಯೋಜನಕಾರಿಯಾದರೂ ಕಿತ್ತೂರು-ಕರ್ನಾಟಕ ( ಉತ್ತರ ಕರ್ನಾಟಕ) ಹಾಗೂ ಕಲ್ಯಾಣ-ಕರ್ನಾಟಕ (ಹೈದರಾಬಾದ್ ಕರ್ನಾಟಕ) ವನ್ನು ಸಮರ್ಪಕವಾಗಿ ಜೋಡಿಸಿ ಉತ್ತರ ಕರ್ನಾಟಕದ ಆರ್ಥಿಕತೆಯನ್ನು ಗಣನೀಯವಾಗಿ ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಆಗಿಲ್ಲ ಎಂದು ಹೇಳಿದರು.
ಹುಬ್ಬಳ್ಳಿವರೆಗೆ ಸೀಮಿತವಾದ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಿಂದ ಬರುವ ಎಲ್ಲ ರೈಲುಗಳನ್ನು ಬೆಳಗಾವಿಂಯವರೆಗೆ ವಿಸ್ತರಿಸಬೇಕು. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಂಯ ಲಾಗುವ ದ್ರಾಕ್ಷಿ, ನಿಂಬೆ, ದಾಳಿಂಬೆಗಳ ರಫ್ತಿಗೆ ಹೆಚ್ಚಿನ ಅವಕಾಶ ಒದಗಿಸಬೇಕು. ರೈಲ್ವೆ ಇಲಾಖೆಯು ಈ ಜಿಲ್ಲೆಗಳ ರೈಲು ನಿಲ್ದಾಣದ ಬಳಿ ಶೀತಲೀಕರಣ ಘಟಕಗಳ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಸುರೇಶ ಅಂಗಡಿ, ಕಿತ್ತೂರು ಕಲ್ಯಾಣ ಕರ್ನಾಟಕ ರೈಲು ಮಾರ್ಗಗಳ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಲೋಕಸತ್ತಾ ಪಕ್ಷದ ಕರ್ನಾಟಕ ಘಟಕದ ಕಾರ್ಯದರ್ಶಿ ರವಿಕಿರಣ ಕಾಂಬಳೆ, ಸಂತೋಷ ಪಾಟೀಲ, ಎಂ ಸಾಖರೆ, ನಿಂಗಪ್ಪ ಕಾಂಬಳೆ, ಸುಶಾಂತ ಪಾಟೀಲ ಉಪಸ್ಥಿತರಿದ್ದರು.