ಬೆಂಗಳೂರು: ವಿಧಾನಸಭೆಯಲ್ಲಿ ಶುಕ್ರವಾರ ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಲೋಕಸಭೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರ ಭಾಷಣ ಸಭೆಯನ್ನು ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಸಂಸದೀಯ ವ್ಯವಸ್ಥೆ ಪ್ರಕಾರ ವಿಧಾನಸಭೆಯಲ್ಲಿ ಸದಸ್ಯರು, ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರನ್ನು ಹೊರತುಪಡಿಸಿ ಬೇರೆಯವರು ಸಭೆ ನಡೆಸಿ, ಭಾಷಣ ಮಾಡಲು ಅವಕಾಶವಿಲ್ಲ. ಆದರೆ, ರಾಜ್ಯ ಬಿಜೆಪಿ ಸರಕಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ ಸಭೆ ಮಾಡಿಸಿ ಹೊಸ ಸಂಪ್ರದಾಯ ಹುಟ್ಟುಹಾಕಲು ಮುಂದಾಗಿದೆ. ಹೀಗಾಗಿ, ನಾವು ಇದನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬಿರ್ಲಾ ಭಾಷಣದ ಬಗ್ಗೆ ಕಲಾಪ ಸಲಹಾ ಸಮಿತಿಯಲ್ಲಿ ಪ್ರಸ್ತಾವವಾದಾಗ ವಿಪಕ್ಷ ನಾಯಕರು ವಿರೋಧಿಸಿದ್ದಾರೆ. ಕಾರ್ಯಕ್ರಮದ ಬಗ್ಗೆ ಸರಕಾರ ನಮ್ಮ ಜತೆ ಚರ್ಚಿಸಿಲ್ಲ. ಆದರೂ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ. ಕಾರ್ಯಕ್ರಮವನ್ನು ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಾಡುವುದಾದರೆ ನಮ್ಮ ಅಭ್ಯಂತರವಿಲ್ಲ. ಆಹ್ವಾನ ಕೊಟ್ಟರೆ ನಾವೂ ಬರುತ್ತೇವೆ ಎಂದು ಸಲಹೆ ನೀಡಿದ್ದೆವು. ಸರಕಾರ ಇದನ್ನು ಒಪ್ಪಿಲ್ಲ ಎಂದರು.
ಇದನ್ನೂ ಓದಿ:ಇನ್ಮುಂದೆ ಆ್ಯಪಲ್ ಸೇರಿ ಎಲ್ಲಾ ಮೊಬೈಲ್‍ಗಳಿಗೆ ‘ಟೈಪ್ ಸಿ’ ಚಾರ್ಜರ್
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಅಧಿವೇಶನವನ್ನು ಐದು ದಿನ ವಿಸ್ತರಿಸುವಂತೆ ನಾವು ಕೇಳಿದ್ದು, ಅದಕ್ಕೆ ಸರಕಾರ ಒಪ್ಪಿಲ್ಲ. ವಿಪಕ್ಷ ಇರೋದು ಇವರು ಹೇಳಿದ್ದು ಕೇಳಿಕೊಂಡು ಹೋಗುವುದಕ್ಕಲ್ಲ. ಹೀಗಾಗಿ, ನಾವು ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇವೆ ಎಂದರು.
ನನ್ನ ರಾಜಕೀಯ ಜೀವನದಲ್ಲೇ ಇಂತಹ ಪದ್ಧತಿಯನ್ನು ನೋಡಿಲ್ಲ. ಇದು ಸಂಪ್ರದಾಯಕ್ಕೆ ವಿರುದ್ಧವಾದುದು ಎಂದು ಆಕ್ರೋಶ ವ್ಯಕ್ತಪಡಿಸಿದರು.