ಚಾಮರಾಜನಗರ: ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ‘ಭಾರತ್ ಜೋಡೋ ಯಾತ್ರೆ’ ಇಂದು ಕರ್ನಾಟಕ ರಾಜ್ಯ ಪ್ರವೇಶಿಸಿದೆ. ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಬಳಿ ಸಿದ್ದರಾಮಯ್ಯ ಅವರು ಬರ ಮಾಡಿಕೊಂಡರು.
ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯವರಿಗೆ ರೇಷ್ಮೆ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು. ಬಳಿಕ ರಾಹುಲ್ ಗಾಂಧಿಯವರ ಕಾರಿನಲ್ಲಿ ಸಮೀಪದ ವನಸಿರಿ ಹೋಟೆಲ್ ಗೆ ತೆರಳಿ ಉಪಾಹಾರ ಸೇವಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಡಾ. ಎಚ್.ಸಿ. ಮಹಾದೇವಪ್ಪ, ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಹಾಜರಿದ್ದರು.
21 ದಿನಗಳ ಯಾತ್ರೆ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ರಾಜ್ಯದಲ್ಲಿ ಸುಮಾರು 21 ದಿನಗಳ ಕಾಲ ಸಂಚರಿಸಲಿದೆ. ವಿವಿಧ ಸಮುದಾಯ, ಸಂಘಟನೆಗಳು, ಚಿಂತಕರ ಜೊತೆ ರಾಹುಲ್ ಸಂವಾದ ನಡೆಸಲಿದ್ದಾರೆ. ಕೆಪಿಸಿಸಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆ.30 ಮತ್ತು ಅ.1 ರಂದು ಚಾಮರಾಜ ನಗರ ಜಿಲ್ಲೆಯಲ್ಲಿ ಸಂಚರಿಸಲಿರುವ ಯಾತ್ರೆ, ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದತ್ತ ಸಾಗಲಿದೆ. ರಾತ್ರಿ ಮೈಸೂರು ನಗರ ಪ್ರವೇಶಿಸಲಿದೆ.
ಇದನ್ನೂ ಓದಿ:ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಸಾಧ್ಯತೆ
ಅ.3ರಂದು ಮೈಸೂರು ನಗರದಿಂದ ಹೊರಡಲಿರುವ ಪಾದಯಾತ್ರೆ ಶ್ರೀರಂಗಪಟ್ಟಣ ತಲುಪಲಿದೆ. ಅ.4,5ರಂದು ವಿರಾಮ. ಅ.6ರಂದು ಮಹದೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಹೊರಟು ಮಂಡ್ಯ ಪ್ರವೇಶಿಸಲಿದೆ. ನಂತರ ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಸಂಚರಿಸಲಿದ್ದು ಅ.21ರಂದು ಆಂಧ್ರಪ್ರವೇಶವನ್ನು ಪ್ರವೇಶಿಸಲಿದೆ. ಭಾರತ್ ಜೋಡೋ ಯಾತ್ರೆಗೆ ಆಯಾ ಜಿಲ್ಲೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಾಥ್ ನೀಡಲಿದ್ದು ಯಾತ್ರೆಯ ಯಶಸ್ಸಿಗೆ ಸಕಲ ಸಿದ್ದತೆಗಳನ್ನು ಮಾಡಲಾಗಿದೆ ಎಂದು ಕೆಪಿಸಿಸಿ ತಿಳಿಸಿದೆ.