Advertisement

ಕಾಂಗ್ರೆಸ್ಸಿಗರು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ: ಜಿಟಿಡಿ

10:05 PM Apr 01, 2019 | Lakshmi GovindaRaju |

ಮೈಸೂರು: ಮೈತ್ರಿ ಪಕ್ಷ ಕಾಂಗ್ರೆಸ್ಸಿಗರ ಧೋರಣೆಯಿಂದ ಅಸಮಾಧಾನಗೊಂಡು ಲೋಕಸಭಾ ಚುನಾವಣಾ ಕಾರ್ಯದಿಂದ ದೂರ ಉಳಿದಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂಬಂಧ ಶಾಸಕ ತನ್ವೀರ್‌ಸೇಠ್ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಜಿಟಿಡಿ ನಿವಾಸಕ್ಕೆ ತೆರಳಿ ಮನವೊಲಿಸುವ ಪ್ರಯತ್ನ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ವೈಯಕ್ತಿಕ ಕಾರಣಗಳಿಂದಾಗಿ ನಾನು ಮೈಸೂರಿನಿಂದ ಹೊರಗಿದ್ದೆ. ನನಗೆ ಯಾರ ಬಗ್ಗೆಯೂ ಅಸಮಾಧಾನವಿಲ್ಲ. ಆದರೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಎರಡೂ ಪಕ್ಷದವರು ಆರಂಭದಲ್ಲೇ ಒಟ್ಟಾಗಿ ಸಭೆ ಮಾಡುವ ಮೂಲಕ ನಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಅಭ್ಯರ್ಥಿ ಆಯ್ಕೆಯಾದ ಮೇಲೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಲಿಲ್ಲ ಎಂದರು.

ಕ್ಷೇತ್ರದಲ್ಲಿ ಬಿಜೆಪಿಯ ನಾಲ್ವರು ಶಾಸಕರಿದ್ದಾರೆ. ಜೆಡಿಎಸ್‌ನ ಮೂವರು ಶಾಸಕರಿದ್ದೇವೆ. ಕಾಂಗ್ರೆಸ್‌ನ ಒಬ್ಬರೇ ಶಾಸಕರಿರುವುದು. ಹೀಗಾಗಿ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಕೆಲಸ ಆಗಬೇಕು. ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಮಾಜಿ ಶಾಸಕ ಕೆ.ವೆಂಕಟೇಶ್‌, ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು ಬಿಟ್ಟರೆ, ಇನ್ಯಾವ ಕಾಂಗ್ರೆಸ್‌ ನಾಯಕರೂ ಮಾತನಾಡಿಲ್ಲ.

ನಾಮಪತ್ರ ಸಲ್ಲಿಕೆ ದಿನವು ಮುಂಚಿತವಾಗಿ ತಿಳಿಸುವ ಕೆಲಸ ಆಗಲಿಲ್ಲ. ಜಂಟಿ ಪತ್ರಿಕಾಗೋಷ್ಠಿ ಕರೆದಿದ್ದಾರೆ ಎಂದು ನಮ್ಮ ಪಕ್ಷದ ಜಿಲ್ಲಾಧ್ಯಕ್ಷರ ಮೂಲಕ ತಿಳಿಸಲಾಯಿತು. ಸಿದ್ದರಾಮಯ್ಯ ಅವರು ಜಂಟಿ ಸಭೆ ನಡೆಸಿದಾಗಲೂ, ಸಾ.ರಾ.ಮಹೇಶ್‌ ಜೊತೆಗೆ ಮಾತುಕತೆ ನಡೆಸಿದ ವಿಚಾರ ನನಗೆ ತಿಳಿದಿಲ್ಲ. ಕಾಂಗ್ರೆಸ್ಸಿಗರೇ ಉತ್ಸಾಹದಿಂದ ಚುನಾವಣೆ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ ಎಂದು ಸುಮ್ಮನಿದ್ದೆ ಎಂದು ತಿಳಿಸಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌, ಸಚಿವ ಸಾ.ರಾ.ಮಹೇಶ್‌, ಕಾಂಗ್ರೆಸ್‌ ಮುಖಂಡರಾದ ತನ್ವೀರ್‌ ಸೇಠ್, ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಎಲ್ಲರೂ ಸೇರಿ ಜಂಟಿ ಸುದ್ದಿಗೋಷ್ಠಿ ನಡೆಸಿ, ನಾವೆಲ್ಲ ಒಂದಾಗಿದ್ದೇವೆ ಎಂಬ ಸಂದೇಶ ನೀಡುತ್ತೇವೆ ಎಂದರು.

Advertisement

ಒಟ್ಟಾಗಿ ಕೆಲಸ: ಈ ವೇಳೆ ಮಾತನಾಡಿದ ಶಾಸಕ ತನ್ವೀರ್‌ಸೇಠ್, ಜಿಲ್ಲಾ ಉಸ್ತುವಾರಿ ಸಚಿವರ ವಿಚಾರದಲ್ಲಿ ನಮ್ಮಿಂದ ತಪ್ಪಾಗಿರುವುದು ನಿಜ. ಮೈತ್ರಿ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕೆಂದರೆ ಎಲ್ಲ ನಾಯಕರುಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಜಿ.ಟಿ.ದೇವೇಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಕೆಲವೊಂದು ತಪ್ಪುಗಳಾಗಿವೆ. ಅವರೆಂದು ಹೈಕಮಾಂಡ್‌ ಹಾಕಿದ ಗೆರೆ ದಾಟುವವರಲ್ಲ, ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡು¤ತೇವೆ ಎಂದರು.

ಇದೇ ವೇಳೆ ಕಾಂಗ್ರೆಸ್‌ ನಾಯಕರು ಜಿ.ಟಿ.ದೇವೇಗೌಡರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಹಾಜರಿದ್ದರು.

ಭಾವಚಿತ್ರವಿಲ್ಲದಕ್ಕೆ ಕಾರ್ಯಕರ್ತರಿಗೆ ಬೇಸರ: ಮೈತ್ರಿ ಪಕ್ಷದ ಅಭ್ಯರ್ಥಿಯಾದರು ಕಾಂಗ್ರೆಸ್‌ ಪಕ್ಷದ ಕರಪತ್ರ, ಭಿತ್ತಿಪತ್ರಗಳಲ್ಲಿ ನಮ್ಮ ಭಾವಚಿತ್ರ ಹಾಕಿಲ್ಲ. ಇದರಿಂದ ನಮ್ಮ ಕಾರ್ಯಕರ್ತರಿಗೆ ಬೇಸರವಾಗಿದೆ. ಆದರೂ ಜಿಲ್ಲೆಯಲ್ಲಿ ಎಚ್‌.ಡಿ.ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರು ನಡೆಸುವ ಜಂಟಿ ಪ್ರಚಾರದಲ್ಲಿ ಭಾಗವಹಿಸುವುದಾಗಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಹೋರಾಟ ನಡೆಸಿದ್ದೇವೆ. ಆ ಚುನಾವಣೆಯಾಗಿ ಇನ್ನೂ ಒಂದು ವರ್ಷ ಆಗಿಲ್ಲ. ಆಗಲೇ ಲೋಕಸಭೆ ಚುನಾವಣೆ ಬಂದಿರುವುದರಿಂದ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಪರಸ್ಪರ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳ ನಡುವೆ ಸ್ಥಳೀಯವಾಗಿ ಸಮನ್ವಯತೆ ಕೊರತೆ ಇದೆ. ಆದರೆ, ವರಿಷ್ಠರ ಮಟ್ಟದಲ್ಲಿ ಮೈತ್ರಿ ಯಾಗಿರುವುದರಿಂದ ಅದನ್ನೆಲ್ಲ ಬದಿಗಿಟ್ಟು ನಾವು ಕೆಲಸ ಮಾಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next