ಬೆಂಗಳೂರು: “ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದು ಹಾಸನ ಕಾಂಗ್ರೆಸ್ ಜಿಲ್ಲಾ ಮುಖಂಡರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎದುರು ನೇರವಾಗಿಯೇ ಹೇಳಿ ಆಕ್ರೋಶ ಹೊರ ಹಾಕಿದ್ದಾರೆ.
ಎಚ್. ಡಿ. ರೇವಣ್ಣ ಅವರಿಂದ ಹಾಸನ ಕಾಂಗ್ರೆಸ್ಸಿಗರು ನೊಂದಿದ್ದಾರೆ, ಅವಮಾನಗೊಂಡಿದ್ದಾರೆ. ಯಾವುದೇ ಕೆಲಸಗಳು ನಡೆಯುತ್ತಿಲ್ಲ, ಕೇಸುಗಳನ್ನು ಹಾಕುತ್ತಿದ್ದಾರೆ. ಹಾಸನದಲ್ಲೇ ಸಮನ್ವಯತೆ ಮೊದಲು ಮಾಡಿ ಎಂಬ ಕಾರ್ಯಕರ್ತರ ಆಕ್ರೋಶಕ್ಕೆ ಎಚ್ಚೆತ್ತ ಸಿದ್ದರಾಮಯ್ಯ ಎಚ್ .ಡಿ.ರೇವಣ್ಣ ಅವರಿಗೆ ಕರೆ ಮಾಡಿದರೆ, ರೇವಣ್ಣ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿದು ಬಂದಿದೆ. ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಕುರಿತು ನಡೆದ ಸಭೆಗೂ ಮುನ್ನಾ, ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅವರ ನಿವಾಸಕ್ಕೆತೆರಳಿ, ಸಚಿವ ಎಚ್.ಡಿ. ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಂದ ಹಾಸನದಲ್ಲಿ ತಮಗಾಗುತ್ತಿರುವ ಅನ್ಯಾಯ ಮನವರಿಕೆ ಮಾಡಿಸಿದ್ದಾರೆ.
ನಂತರ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ನಡೆದ ಸಭೆಯಲ್ಲೂ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಯೋಜನೆ ಗುತ್ತಿಗೆ ಸಿಗದಂತೆ ಮಾಡಿದ್ದು, ಎಲ್ಲವನ್ನೂ ರೇವಣ್ಣ ಹೇಳಿದವರಿಗೆ ನೀಡಲಾಗುತ್ತಿದೆ. ಯಾವುದಾದರೂ ಸಮಸ್ಯೆ ತೆಗೆದುಕೊಂಡು ಇಂಜನಿಯರ್‌ಗಳ ಬಳಿ ಹೋದರೆ, ಪ್ರಜ್ವಲ್ ರೇವಣ್ಣ ಅವರನ್ನು ಕೇಳಿಕೊಂಡು ಬನ್ನಿ ಎಂದು ನೇರವಾಗಿಯೇ ಹೇಳಿ ಕಳುಹಿಸುತ್ತಾರೆ. ಜಿಲ್ಲೆ ವ್ಯಾಪ್ತಿಗೆ ಬರುವ ನಿಗಮ ಮಂಡಳಿ ಅಧ್ಯಕ್ಷರು, ನಿರ್ದೇಶಕರ ಎಲ್ಲವನ್ನೂ ಜೆಡಿಎಸ್ ಕಾರ್ಯಕರ್ತರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನೂ ಜೆಡಿಎಸ್ ಕಾರ್ಯಕರ್ತರಂತೆ ನೋಡಿಕೊಳ್ಳುವುದಾಗಿ ಎಚ್.ಡಿ. ರೇವಣ್ಣ ಅವರಿಂದ ಶೃಂಗೇರಿ ಶಾರದಾಂಬೆಯ ಮೇಲೆ ಆಣೆ ಮಾಡಿಸಿ, ದೇವೇಗೌಡರ ಸಮ್ಮುಖದಲ್ಲಿ ಮಾತುಕತೆ ನಡೆಸಿದರೆ, ಬೆಂಬಲ ಸೂಚಿಸಲಾಗುವುದು ಎಂದು ಮುಖಂಡರು ಸ್ಪಷ್ಟಪಡಿಸಿದ್ದಾರೆ. ಅಹವಾಲು ಆಲಿಸಿದ ನಾಯಕರು ರೇವಣ್ಣ ಜತೆ ಮಾತುಕತೆ ನಡೆಸಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೂ ಸಮಾನ ಗೌರವ ಮತ್ತು ಅವಕಾಶಗಳು ದೊರೆಯುವಂತೆ
ನೋಡಿಕೊಳ್ಳಲು ಸೂಚಿಸುವುದಾಗಿ ಹೇಳಿದ್ದಾರೆ. ಹೈಕಮಾಂಡ್ ಆಣತಿ ಪಾಲಿಸುವಂತೆ ತಿಳಿಸಿದ್ದಾರೆ
ಎನ್ನಲಾಗಿದೆ.
ರಾಜ್ಯದಲ್ಲಿ ಮೈತ್ರಿ ಇದ್ದರೂ ಹಾಸನದಲ್ಲಿ ಅದು ಸಮರ್ಪಕವಾಗಿಲ್ಲ. ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಮ್ಮ ನೋವನ್ನು ನಾಯಕರ ಗಮನಕ್ಕೆ ತಂದಿದ್ದೇವೆ. ನಾಯಕರು ರೇವಣ್ಣ
ಅವರೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ತೊಂದರೆ ಕೊಡುವುದಿಲ್ಲ ಎಂದು ರೇವಣ್ಣ ಬಹಿರಂಗವಾಗಿ ಹೇಳಬೇಕು.
● ಗಂಡಸಿ ಶಿವರಾಮ್, ಮಾಜಿ ಸಚಿವ.