ಬೆಂಗಳೂರು: ಉಪಚುನಾವಣೆ ಮತದಾನಕ್ಕೂ ಮೊದಲೇ ಕಾಂಗ್ರೆಸ್, ಜೆಡಿಎಸ್ ಶಸ್ತ್ರ ತ್ಯಾಗ ಮಾಡಿರುವುದು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದರಿಂದ ಸ್ಪಷ್ಟವಾಗಿದೆ. ಕಾಂಗ್ರೆಸ್‌ನವರು ಮೈತ್ರಿ ಬಯಸುತ್ತಿದ್ದು, ಭಿಕ್ಷುಕರ ಪಾಡಿನಂತಾಗಿದೆ. ಕಾಂಗ್ರೆಸ್ಸಿಗರು ಭಿಕ್ಷುಕರಂತೆ ವರ್ತಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಡಿ.9ರಂದು ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದಾರೆ. ಆದರೆ ರಾಜ್ಯಸಭಾ ಚುನಾವಣೆಗೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದು, ನಾವು ಈಗಾಗಲೇ ಸಿಹಿ ಸುದ್ದಿ ನೀಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್‌ಗೆ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದ್ದಿದ್ದರೆ, ಜನತೆ ಮೇಲೆ ನಂಬಿಕೆ ಇದ್ದಿದ್ದರೆ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಬಹುದಿತ್ತು. ಆದರೆ ನಾಮಪತ್ರವನ್ನೇ ಸಲ್ಲಿಸದೆ ಯುದ್ದಕ್ಕೂ ಮೊದಲೇ ಶಸ್ತ್ರ ತ್ಯಾಗ ಮಾಡಿವೆ. ಕಾಂಗ್ರೆಸ್‌ನವರು ಮೈತ್ರಿ ಬಯಸುತ್ತಿದ್ದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹವಾಸವೇ ಬೇಡ ಎನ್ನುತ್ತಿದ್ದಾರೆ.
ಕಾಂಗ್ರೆಸ್‌ನವರು ತಾವಾಗಿಯೇ ಹೋಗಿ ನಿಂದನೆಗೆ ಗುರಿಯಾಗುವ ಸ್ಥಿತಿಗೆ ತಲುಪಿದ್ದು, ಅವರ ಪಾಡು ಭಿಕ್ಷುಕರ ಪಾಡಿನಂತಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್, ಜೆಡಿಎಸ್‌ನ ಒಟ್ಟು ಸಂಖ್ಯಾಬಲ 101 ಇದೆ ಎಂದು ಹೇಳುತ್ತಾರೆ.
ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದರೂ ಸರಳ ಬಹುಮತದ ಮ್ಯಾಜಿಕ್ ಸಂಖ್ಯೆ ಸಿಗಲಿದೆ. ಅದರ ಆಧಾರದ ಮೇಲೆ ರಾಜ್ಯಸಭಾ ಸ್ಥಾನವನ್ನೂ ಗೆಲ್ಲಲು ಅವಕಾಶವಿತ್ತು. ಆದರೆ ನಾಮಪತ್ರವನ್ನೇ ಸಲ್ಲಿಸಿಲ್ಲ. ರಾಜ್ಯಸಭಾ ಚುನಾವಣೆಯು ಉಪಚುನಾವಣೆಗೆ ಪ್ರಾಥಮಿಕ ಪರೀಕ್ಷೆಯಂತ್ತಿತ್ತು. ಕಾಂಗ್ರೆಸ್, ಜೆಡಿಎಸ್ ಇಲ್ಲೇ ವಿಫಲವಾಗಿದ್ದು, ಇನ್ನು ಉಪಚುನಾವಣೆ ಎಂಬ ಮುಖ್ಯ ಪರೀಕ್ಷೆಗೆ ತಯಾರಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲಿರುವ ಕೆ.ಸಿ.ರಾಮಮೂರ್ತಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.