ಗುತ್ತಲ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಮರ್ಪಕವಾಗಿ ತಾಡಪತ್ರಿಗಳನ್ನು ನೀಡದೆ, ಕೇವಲ ರಾಜಕೀಯ ಕಾರ್ಯಕರ್ತರಿಗೆ ಮಾತ್ರ ದೊರೆಯುವಂತೆ ಮಾಡಿರುವ ಕೃಷಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರಕ್ಕೆ ಕೈ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಈರಪ್ಪ ಲಮಾಣಿ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯಾವ ರಾಜಕೀಯ ಪಕ್ಷಗಳು ಇಂತಹ ಕಾನೂನು ಮಾಡಿಲ್ಲ. ಎಲ್ಲ ರೈತರನ್ನು ಸಮಾನವಾಗಿ ನೋಡಿಕೊಂಡು ಬಂದಿವೆ. ಆದರೆ ಇಂದು ರೈತರು ತಾಡಪತ್ರಿಗಳಿಗೆ ಅಲೆದಾಡುತ್ತಿದ್ದಾರೆ. 300 ತಾಡಪತ್ರಿಗಳನ್ನು ಶಾಸಕರು, ಜಿಪಂ, ತಾಪಂ ಸದಸ್ಯರ ಚೀಟಿ ತಂದವರಿಗೆ ಮಾತ್ರ ನೀಡುತ್ತೇವೆ ಎಂದು ಹೇಳಿ ರೈತರಿಗೆ ಅನ್ಯಾಯ ಮಾಡಿರುವುದು ಮೇಲ್ನೋಟಕ್ಕೆ ಸಾಬಿತಾಗಿದೆ ಎಂದು ದೂರಿದರು.
ಕೃಷಿ ಸಚಿವರ ಜಿಲ್ಲೆಯಲ್ಲೇ ರೈತರಿಗೆ ಅನ್ಯಾಯವಾಗುತ್ತಿರುವುದು ವಿಷಾದನೀಯ. ಕೃಷಿ ಸಚಿವ ಬಿ.ಸಿ. ಪಾಟೀಲರಿಗೆ ತಮ್ಮ ತವರು ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಲು ಆಗುತ್ತಿಲ್ಲ. ಇನ್ನೂ ರಾಜ್ಯದ ರೈತರಿಗೆ ನ್ಯಾಯ ಒದಗಿಸಿಕೊಡುವರೇ ಎಂಬ ಅನುಮಾನ ಕಾಡುತ್ತಿದೆ. ರೈತರಿಗೆ ರಾಜಕೀಯ ಗೊತ್ತಿಲ್ಲ. ಅಧಿಕಾರಿಗಳ ಹೊಸ ಕಾನೂನಿನ ಅನ್ವಯ ರೈತರೂ ರಾಜಕೀಯ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಈರಪ್ಪ ಲಮಾಣಿ ಹೇಳಿದರು.
ಜಿಪಂ ಮಾಜಿ ಸದಸ್ಯ ಸಿ.ಬಿ ಕುರವತ್ತಿಗೌಡರ ಮಾತನಾಡಿ, ಈ ಹಿಂದೆ ಫಲಾನುಭವಿಗಳ ಸಂಖ್ಯೆ ಹೆಚ್ಚಾದಾಗ ಸಂದರ್ಭದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ಈ ಕಾನೂನು ಇದ್ದಾಗ್ಯೂ ಅಧಿಕಾರಿಗಳ ಜನಪ್ರತಿನಿಧಿಗಳ ಹೆಸರಲ್ಲಿ ರೈತರಿಗೆ ವಂಚನೆ ಮಾಡಿರುವುದು ಅಪರಾಧವಾಗಿದೆ ಎಂದರು.
ಪಪಂ ಸದಸ್ಯ ನಾಗರಾಜ ಎರಿಮನಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಸಂಜಯ ಗಾಂಧಿ ಸಂಜೀವಣ್ಣನವರ ಮಾತನಾಡಿ, ಇಷ್ಟೆಲ್ಲ ಅವಾಂತರ ಮಾಡಿರುವ ಸಹಾಯಕ ಕೃಷಿ ನಿರ್ದೇಶಕ ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಈ ಕೂಡಲೇ ಅಮಾನತು ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಕೊಟೆಪ್ಪ ಬನ್ನಿಮಟ್ಟಿ, ಲಿಂಗೇಶ ಬೆನ್ನೂರ, ಆಶ್ರಯ ಕಮಿಟಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ಪ್ರಮುಖರಾದ ಶಿವಣ್ಣ ಬಂಡಿವಡ್ಡರ, ರಮೇಶ ಲಮಾಣಿ, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ ಬಂಡಿವಡ್ಡರ, ಹನುಮಂತ ಅಗಸಿಬಾಗಿಲದ, ಪೀರಸಾಬ ಹಾನಗಲ್ ಇದ್ದರು.