ಹೊಸದಿಲ್ಲಿ: ”ವಿಪಕ್ಷ ನಾಯಕನ ಜವಾಬ್ದಾರಿಯನ್ನು ರಾಹುಲ್ ಗಾಂಧಿ ಅವರು ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಬಿಜೆಪಿ ಹೊಂದಿರುವ ಪ್ರತಿಯೊಂದು ಯೋಜನೆಗೂ ಸವಾಲು ಹಾಕುತ್ತಾರೆ’ ಎಂದು ಉದ್ಯಮಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸ್ವೀಕರಿಸುವಂತೆ ರಾಹುಲ್ ಗಾಂಧಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಕೇಳಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, “ರಾಹುಲ್ ಗಾಂಧಿಯವರು ನನಗೆ ನನ್ನ ಸಹೋದರನಂತೆಯೇ , ಅವರ ಬಗ್ಗೆ ಚೆನ್ನಾಗಿ ತಿಳಿದಿದ್ದೇನೆ. ಅವರು ಏನು ಮಾಡಿದರೂ ಅವರು ತಮ್ಮ ಹೃದಯ, ಮನಸ್ಸು ಮತ್ತು ಆತ್ಮಸಾಕ್ಷಿಯನ್ನು ಹಾಕುತ್ತಾರೆ ಎಂದು ನನಗೆ ತಿಳಿದಿದೆ’ ಎಂದು ಹೇಳಿದರು.
ತುರ್ತು ಪರಿಸ್ಥಿತಿಯ ಕುರಿತು ಪ್ರಧಾನಿ ಮೋದಿಯವರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿ “ಇದು ಸಂಸತ್ತಿನ ಮೊದಲ ದಿನ, ಇದು ಸಕಾರಾತ್ಮಕ ಟಿಪ್ಪಣಿಯಿಂದ ಪ್ರಾರಂಭವಾಗಬೇಕು.ಪ್ರಧಾನಿಯವರು ಇದನ್ನೆಲ್ಲ ಮೀರುತ್ತಾರೆ ಎಂದುಕೊಂಡಿದ್ದೆ. ಅವರು ಅದನ್ನು ಕರಾಳ ದಿನಕ್ಕಿಂತ ಪ್ರಕಾಶಮಾನವಾದ ದಿನ ಎಂದು ಭಾವಿಸಬೇಕು ಎಂದು ನಾನು ಭಾವಿಸುತ್ತೇನೆ. ಪ್ರಧಾನಮಂತ್ರಿಯವರು ಭಾರತಕ್ಕೆ ಕರಾಳ ದೃಷ್ಟಿಯ ಚಿಂತನಾಕ್ರಮವನ್ನು ಪಡೆದಿರುವುದು ದುಃಖಕರ ಎಂದು ನಾನು ಭಾವಿಸುತ್ತೇನೆ. ನಾವು ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡಬೇಕು, ದೇಶಕ್ಕಾಗಿ ಪ್ರಗತಿಪರ ವಿಷಯಗಳ ಬಗ್ಗೆ ಮಾತನಾಡಬೇಕು’ ಎಂದರು.
ಕಾಂಗ್ರೆಸ್ ನಾಯಕಿ,ಪತ್ನಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇರಳದ ವಯನಾಡ್‌ನಿಂದ ಸ್ಪರ್ಧಿಸಲಿರುವ ಕುರಿತು ಪ್ರತಿಕ್ರಿಯಿಸಿರುವ ವಾದ್ರಾ, ” ರಾಹುಲ್ ವಯನಾಡಿನ ಜನರಿಂದ ಅಪಾರ ಪ್ರೀತಿಯನ್ನು ಪಡೆದಿದ್ದಾರ. ಪ್ರಿಯಾಂಕಾ ಅಲ್ಲಿಂದ ಸ್ಪರ್ಧಿಸುವುದು ಸಂತಸದ ವಿಚಾರವಾಗಿದ್ದು, ಅವರು ಗೆದ್ದು ವಯನಾಡ್ ಸಂಸದೆಯಾರಾದರೆ ರಾಹುಲ್ ವಯನಾಡಿಗೆ ಏನೇನು ಯೋಚನೆ, ಯೋಜನೆ ಹಾಕಿಕೊಂಡಿದ್ದಾರೋ ಅದನ್ನು ಈಡೇರಿಸಲಿದ್ದಾರೆ.ವಯನಾಡಿನ ಜನತೆ ಪ್ರಿಯಾಂಕಾ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸಿ ನಂತರ ಸಂಸತ್ತಿಗೆ ಬರುತ್ತಾರೆ ಎಂಬ ಭರವಸೆ ನನಗಿದೆ” ಎಂದರು.