Advertisement

ರೇಣುಕಾಚಾರ್ಯ, ಸುಧಾಕರ್‌ ವರ್ತನೆ ಖಂಡಿಸಿ ಪ್ರತಿಭಟನೆ

03:47 PM Mar 13, 2020 | Team Udayavani |

ಶ್ರೀನಿವಾಸಪುರ: ಶಾಸಕ ರಮೇಶ್‌ಕುಮಾರ್‌, ಉತ್ತಮ ವ್ಯಕ್ತಿತ್ವ ಹೊಂದಿದ್ದು, ಸಮಾಜದ ಎಲ್ಲ ವರ್ಗದವರ ದನಿಯಾಗಿದ್ದಾರೆ. ಜತೆಗೆ ರಾಜ್ಯದ ಮುತ್ಸದ್ದಿ ರಾಜಕಾರಣಿಯಾಗಿ ಕೆಲಸ ಮಾಡುತ್ತಿರುವ ಅವರ ಬಗ್ಗೆ ಕೀಳಾಗಿ ಮಾತನಾಡಿರುವ ರೇಣುಕಾಚಾರ್ಯ ಹಾಗೂ ಸುಧಾಕರ್‌ ವರ್ತನೆ ಖಂಡಿಸಿ, ಕಾಂಗ್ರೆಸ್‌ನ ನೂರಾರು ಮಂದಿ ಕಾರ್ಯಕರ್ತರು ಪಟ್ಟಣದ ಬಸ್‌ ನಿಲ್ದಾಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಇಬ್ಬರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಿಂದ ರೇಣುಕಾಚಾರ್ಯ ಪ್ರತಿಕೃತಿಯೊಂದಿಗೆ ಬಸ್‌ ನಿಲ್ದಾಣದವರಿಗೆ ಮೆರವಣಿಗೆ ನಡೆಸಿದರು. ನಂತರ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಬಗ್ಗೆ ಹಗುರವಾಗಿ ಮಾತನಾಡಿದ ರೇಣುಕಾಚಾರ್ಯ ಹಾಗು ಸುಧಾಕರ್‌ ವಿರುದ್ಧ ಘೋಷಣೆ ಕೂಗಿದರು.

ಶಾಸಕರ ವರ್ಚಸ್ಸು ಕುಗ್ಗಿಸುವ ಕೆಲಸ: ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ದಿಂಬಾಲ್‌ ಅಶೋಕ್‌ ಮಾತನಾಡಿ, ಶಾಸಕ ರಮೇಶ್‌ಕುಮಾರ್‌ ವರ್ಚಸ್ಸು ಕುಗ್ಗಿಸುವ ಸಲುವಾಗಿ ಕೆಲವು ಗಂಭೀರ ಆರೋಪ ಮಾಡಿದ್ದಾರೆ. ಕೊಲೆ ಪ್ರಕರಣಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಮಾಡದ ಕೆಲಸಗಳನ್ನು ಅವರ ಮೇಲೆ ಹಾಕಿದ್ದರೂ, ಅದರಿಂದ ಖುಲಾಸೆಯಾಗಿದ್ದಾರೆ. ಆದರೂ ರಮೇಶ್‌ ಕುಮಾರ್‌ ಕೊಲೆ ಮಾಡಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅವರಿಗೆ ತಾಕತ್ತಿದ್ದರೆ ಕೋರ್ಟ್‌ಗೆ ಹೋಗಬೇಕು. ಆದರೆ ಬಾಯಿಗೆ ಬಂದದ್ದನ್ನು ಮಾತನಾಡುವುದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ಆರೋಪಿಸಿರು.

ಸುಧಾರಕರ್‌ ಮೊದಲು ರಾಜಕಾರಣ ತಿಳಿದುಕೊಳ್ಳಲಿ: ಚಿಕ್ಕಬಳ್ಳಾಪುರದ ಸುಧಾಕರ್‌, ಮಟ್ಟಿಗೆ ಹೇಳುವುದಾದರೆ ಹಣದ ಆಸೆಯಿಂದ ಪಕ್ಷ ಬದಲಾವಣೆ ಮಾಡಿದ್ದಾರೆ. ಇದುವರೆಗೂ ಕೆ.ಸಿ.ವ್ಯಾಲಿ, ಎತ್ತಿನ ಹೊಳೆ ವಿಚಾರದ ಬಗ್ಗೆ ಬಾಯಿ ತೆರೆದಿಲ್ಲ. ಅಂತಹವರು ರಮೇಶ್‌ಕುಮಾರ್‌ ಬಗ್ಗೆ ಮಾತನಾಡುತ್ತಾರೆ. ಅವರ ರಾಜಕಾರಣ ಕುತಂತ್ರವಾಗಿದ್ದು, ರಮೇಶ್‌ಕುಮಾರ್‌ ವ್ಯಕ್ತಿತ್ವವನ್ನು ತೇಜೋವಧೆ ಮಾಡಲು ನಡೆಸುತ್ತಿರುವ ಹುನ್ನಾರವಾಗಿದೆ. ಹೀಗೆ ಮಾತನಾಡುತ್ತಿದ್ದರೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಬೆಕಾಗುತ್ತದೆ ಎಂದು ಎಚ್ಚರಿಸಿದರು.

ಕ್ಷೇತ್ರಕ್ಕೆ ಬಂದು ಶಾಸಕರ ಕುರಿತು ತಿಳಿದುಕೊಳ್ಳಿ: ರಾಯಲ್ಪಾಡು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ರೆಡ್ಡಿ ಮಾತನಾಡಿ, ರಮೇಶ್‌ ಕುಮಾರ್‌ ಈ ನಾಡಿನ ಜನಪ್ರಿಯ ನಾಯಕರಾಗಿದ್ದಾರೆ. ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರಕ್ಕೆ ಮಾತ್ರವಲ್ಲದೆ ಕರ್ನಾಟಕದ ನಾಯಕರಾಗಿದ್ದಾರೆ. ತಮ್ಮ ಜೀವಮಾನವನ್ನು ಜನರಿಗೆ ಮುಡಿಪಾಗಿಟ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಎಲ್ಲೋ ಇದ್ದು ಮಾತನಾಡುವ ವಿರೋಧಿಗಳು ಈ ಕ್ಷೇತ್ರಕ್ಕೆ ಬಂದು ಜನರನ್ನು ವಿಚಾರಿಸಬೇಕು. ಆಗ ನಿಜಾಂಶ ಗೊತ್ತಾಗುತ್ತದೆ. ಆದರೆ ಉತ್ತಮ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಶಾಸಕರ ಚಾರಿತ್ರ್ಯವಧೆ ಮಾಡುವುದನ್ನು ನಾವು ಸಹಿಸುವುದಿಲ್ಲ. ಅದಕ್ಕೆ ಪ್ರತ್ಯುತ್ತರವಾಗಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ, ಕೆ.ಕೆ. ಮಂಜುನಾಥ್‌, ವೇಣು, ಗೌನಿಪಲ್ಲಿ ಮಧು, ಪುರಸಭೆ ಸದಸ್ಯ ಬಿ.ಆರ್‌.ಬಾಸ್ಕರ್‌, ಉಪ್ಪರಪಲ್ಲಿ ತಿಮಯ್ಯ, ರಾಮಾಂಜಮ್ಮ, ಶಿವರಾಜ್‌ ಇತರರು ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next