Advertisement

Congress Workers: “ಕೈ” ಕಾರ್ಯಕರ್ತರ ಸಮಸ್ಯೆಗೆ ಸಿಎಂ ಸ್ಪಂದನೆ

12:08 AM Jul 14, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ಕಚೇರಿಯಲ್ಲಿ ಕೆಲಸ ಮಾಡುವ ಸ್ವಚ್ಛತಾ ಸಿಬ್ಬಂದಿಗೆ ಮನೆ, ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡದಂತೆ ಹುಬ್ಬಳ್ಳಿ-ಧಾರವಾಡ ಜಿಲ್ಲಾಧಿಕಾರಿಗೆ ಸೂಚನೆ, ಹಾಲು ಉತ್ಪಾದಕರಿಗೆ ಅನುಕೂಲ ಆಗುವಂತೆ ಸಾಫ್ಟ್ವೇರ್‌ ಸಿದ್ಧಪಡಿಸಲು ಕೆಎಂಎಫ್‌ಗೆ ತಾಕೀತು… ಹೀಗೆ ತಮ್ಮ ಬಳಿ ಬಂದ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳದಲ್ಲೇ ಪರಿಹಾರದ ಭರವಸೆಗಳನ್ನು ಕೊಟ್ಟರು.

Advertisement

2ನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ “ಕಾರ್ಯಕರ್ತರೊಂದಿಗೆ ನಿಮ್ಮ ಸಿಎಂ’ ಕಾರ್ಯಕ್ರಮದ ಮೂಲಕ ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರೂ ಗೊಂದಲ ಮಾಡಿಕೊಳ್ಳಬೇಡಿ. ಎಲ್ಲರ ಅಹವಾಲುಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಅಹವಾಲು ಪತ್ರ ಸ್ವೀಕರಿಸಿದ ಸಿಎಂ ಅದರ ವಿವರಣೆ ಕೇಳಿ ಕೆಲವು ಪ್ರಕರಣಗಳಿಗೆ ಸಂಬಂಧಿಸಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಅಂಗವಿಕಲರ ಬಳಿಗೆ ಖುದ್ದಾಗಿ ತೆರಳಿದ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಿದರು. ಕೆಲವರು ತ್ರಿಚಕ್ರ ವಾಹನಕ್ಕೆ ಬೇಡಿಕೆಯಿಟ್ಟರೆ ಮತ್ತೆ ಕೆಲವರು ಸರಕಾರಿ ಉದ್ಯೋಗ, ಗುತ್ತಿಗೆ ನೌಕರಿ, ಸ್ವಯಂ ಉದ್ಯೋಗಕ್ಕೆ ಅನುದಾನ, ಸಾಲದ ಸವಲತ್ತು ಹೀಗೆ ವಿವಿಧ ಬೇಡಿಕೆಗಳನ್ನು ನೀಡಿದರು.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಫ‌ಲಾನುಭವಿಗಳ ಪ್ರತಿಕ್ರಿಯೆಯನ್ನೂ ಸಿಎಂ ಪಡೆದುಕೊಂಡರು.

ಕೆಎಂಎಫ್ ತಂತ್ರಾಂಶ ಪರಿಷ್ಕರಣೆಗೆ ತಾಕೀತು
ಸದ್ಯ ಕೆಎಂಎಫ್‌ನಲ್ಲಿರುವ ತಂತ್ರಾಂಶ (ಸಾ‌ಫ್ಟ್‌ವೇರ್‌) ಹಾಲು ಉತ್ಪಾದಕರಿಗೆ ಅನುಕೂಲಕಾರಿಯಾಗಿಲ್ಲ. ಸೂಕ್ತವಾದ ಕನ್ನಡದ ಸಾಫ್ಟ್ವೇರ್‌ ಅಳವಡಿಸುವಂತೆ ಮೈಸೂರಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳದ ಎಸ್‌. ಶಿವನಾಗಪ್ಪ ಮನವಿ ಸಲ್ಲಿಸಿದರು. ಮುಖ್ಯಮಂತ್ರಿಗಳು ಸ್ಥಳದಲ್ಲೇ ಕೆಎಂಎಫ್ ಎಂಡಿ ಜಗದೀಶ್‌ ಅವರಿಗೆ ಫೋನ್‌ ಮೂಲಕ ಸಂಪರ್ಕಿಸಿ, ಹಾಲು ಉತ್ಪಾದಕರ ಸ್ನೇಹಿಯಾಗಿರುವ ಸಾ‌ಫ್ಟ್‌ವೇರ್‌ ಅಳವಡಿಸುವಂತೆ ಸೂಚಿಸಿದರು.

ಕಾರ್ಯಕರ್ತರಿಗೆ ಸದ್ಯಕ್ಕಿಲ್ಲ ನಿಗಮ-ಮಂಡಳಿ ಅಧ್ಯಕ್ಷಗಿರಿ
ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಸೆ ಮಾಡಿದ್ದು, ಸದ್ಯಕ್ಕೆ ಯಾವುದೇ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಮಾಡುವುದಿಲ್ಲ ಎಂದಿದ್ದಾರೆ.
ಶನಿವಾರ ನಡೆದ “ಕಾರ್ಯಕರ್ತರೊಂದಿಗೆ ನಿಮ್ಮ ಸಿಎಂ’ ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕರ್ತರು ನಿಗಮ-ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟರು. ಆರಂಭದ ಒಂದೆರಡು ಮನವಿಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದ ಸಿಎಂ, ನಂತರವೂ ಅಂತಹುದೇ ಮನವಿಗಳು ಹೆಚ್ಚಾಗಿ ಬರಲಾರಂಭಿಸಿದ್ದರಿಂದ ಮುಂದಿನ ಅವಧಿಗೆ ಮಾಡುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next