Advertisement

ಜನರ ನಿರೀಕ್ಷೆ ಹುಸಿ ಮಾಡಲಾರೆ: ಜಮೀರ್‌

05:13 PM Sep 06, 2018 | Team Udayavani |

ಹಾವೇರಿ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಅನುಕೂಲ ಆಗುತ್ತದೆ ಎಂದು ಪ್ರಚಾರ ವೇಳೆ ಹೇಳಿದ್ದೆ. ಈಗ ಜನ ನಮ್ಮನ್ನು ಗೆಲ್ಲಿಸಿದ್ದು ಕೆಲಸ ಮಾಡಿ ತೋರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

Advertisement

ಇಲ್ಲಿನ ಹೊಸಮಠದಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಬುಧವಾರ ಆಯೋಜಿಸಿದ್ದ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಗೆಲುವು ಸಾಧಿ ಸಿರುವ ಕಾಂಗ್ರೆಸ್‌ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ ಗೆಲ್ಲುವ ನಿರೀಕ್ಷೆ ಇರಲಿಲ್ಲ, ಇಡೀ ರಾಜ್ಯದಲ್ಲಿ ಹಾವೇರಿ ಜಿಲ್ಲೆ ಈಗ ಚರ್ಚಿತ ವಿಷಯವಾಗಿದೆ. ಜಿಲ್ಲೆಯಲ್ಲಿ ನಾಲ್ಕು ಬಿಜೆಪಿ ಶಾಸಕರಿದ್ದಾಗಲೂ ಕಾಂಗ್ರೆಸ್‌ ಗೆ ಇಷ್ಟು ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎಂದು ಚರ್ಚೆ ಮಾಡುತ್ತಿದ್ದಾರೆ. ಈ ಗೆಲುವು ನನಗಿಂತ ಹೆಚ್ಚಾಗಿ ಪಕ್ಷದ ಕಾರ್ಯಕರ್ತರಿಂದ, ಮುಖಂಡರಿಂದ ಸಾಧ್ಯವಾಗಿದೆ ಎಂದರು.

ನಾವು ಗೆದ್ದಿದ್ದೇವೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೇಗೆ ಕೆಲಸ ಮಾಡೋದು ಎಂದು ಪಕ್ಷದ ಸದಸ್ಯರು ಚಿಂತೆ ಮಾಡಬೇಡುವ ಅಗತ್ಯವಿಲ್ಲ. ನಾನು ಜಿಲ್ಲಾ ಮಂತ್ರಿಯಾಗಿ ನಿಮ್ಮ ಜೊತೆ ಇರುತ್ತೇನೆ. ನಮ್ಮದು ಹೈಕಮಾಂಡ್‌ ಪಕ್ಷ. ನನ್ನ ಕೆಲಸ ನೋಡಿ ಹೈಕಮಾಂಡ್‌ ಮಂತ್ರಿ ಸ್ಥಾನ ನೀಡಿದೆ. ಉತ್ತಮವಾಗಿ ಕೆಲಸ ಮಾಡುವವರನ್ನು ಪಕ್ಷ ಗುರುತಿಸುವುದು ಎಂಬುದಕ್ಕೆ ನಾನೇ ಸಾಕ್ಷಿ ಎಂದರು. 

ರಾಜ್ಯದಲ್ಲಿ ತಿಪ್ಪರಲಾಗ ಹಾಕಿದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ, ಜನ ಮೋದಿಗೂ ಒಂದು ಅವಕಾಶ ಕೊಟ್ಟಿದ್ದಾರೆ. ಬಹಳಷ್ಟು ಕಾಂಗ್ರೆಸ್‌ ನಾಯಕರು ಅಚ್ಛೆ ದಿನ್‌ ಬರಲಿಲ್ಲ ಅಂತಾರೆ, ಇದನ್ನು ನಾನು ಒಪ್ಪಲ್ಲ. ಅಚ್ಛೆ ದಿನ್‌ ಬಂದಿದೆ. ಆದರೆ, ಅದು ಬಿಜೆಪಿ, ಆರ್‌ಎಸ್‌ಎಸ್‌, ಮೋದಿ, ಅಮಿತ್‌ ಶಾಗೆ ಮಾತ್ರ ಬಂದಿದೆ ಎಂದ ಅವರು, ನಮಗೆ ಮನ್‌ ಕಿ ಬಾತ್‌ ಬೇಡ, ಕಾಮ್‌ ಕಿ ಬಾತ್‌ ಬೇಕು. ಎಲ್ಲ ಸಮಾಜದರಿಗೆ ನ್ಯಾಯ ಒದಗಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಬಿ.ಸಿ. ಪಾಟೀಲ, ವಿಪ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಜಿಪಂ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಮಾಜಿ ಶಾಸಕ ಅಜ್ಜಂಫೀರ್‌ ಖಾದ್ರಿ, ಎಸ್‌.ಆರ್‌. ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್‌.ಸಿ. ಶಿಡೇನೂರ ಇತರರಿದ್ದರು.

Advertisement

ಹುಲಿಯನ್ನು ಇಲಿ ಮಾಡಿದ್ದಾರೆ
ಹಾನಗಲ್ಲನಲ್ಲಿ ಸಚಿವ ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ ದೊಡ್ಡ ಲೀಡರ್‌.ಅವರು ಹುಲಿ ಇದ್ದಂತೆ. ಆದರೆ, ಜನ ಈಗ ಅವರ ವಾರ್ಡ್ನಲ್ಲೇ ಕಾಂಗ್ರೆಸ್‌ ಗೆಲ್ಲಿಸುವ ಮೂಲಕ ಉದಾಸಿ ಅವರನ್ನ ಇಲಿ ಮಾಡಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಒಂದಾಗಿ ಕೆಲಸ ಮಾಡಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದೇ ನಮ್ಮ ಮುಂದಿನ ಗುರಿ ಎಂದು ಸಚಿವ ಜಮೀರಅಹ್ಮದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next