Advertisement

ಉತ್ತರ ಕನ್ನಡದಲ್ಲಿ 10 ಬಾರಿ ಕಾಂಗ್ರೆಸ್‌, 6 ಬಾರಿ ಕಮಲಕ್ಕೆ ಮಣೆ

10:17 PM Mar 25, 2024 | Team Udayavani |

ಕಾರವಾರ: ಅರಬ್ಬಿ ಸಮುದ್ರ, ಪಡುವಣ ಘಟ್ಟ ಸಾಲು, ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆ ನಡುವಿನ ಲೋಕಸಭಾ ಕ್ಷೇತ್ರ ಉತ್ತರ ಕನ್ನಡ. ಬ್ರಿಟಿಷರ ಕಾಲಕ್ಕೆ ಅವಿಭಜಿತ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ಕೆನರಾ ಡಿಸ್ಟ್ರಿಕ್ಟ್ ಎಂದು ಕರೆಯಲ್ಪಡುತ್ತಿದ್ದವು. ಸ್ವಾತಂತ್ರÂದ ಬಳಿಕವೂ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರ ಕೆನರಾ ಲೋಕಸಭಾ ಕ್ಷೇತ್ರ ಎಂದೇ ಕರೆಯಲಾಗುತ್ತಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಜತೆ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ವಿಧಾನಸಭಾ ಕ್ಷೇತ್ರಗಳು ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಈ ಸಲ ಮತದಾರರ ಸಂಖ್ಯೆ 50 ಸಾವಿರದಷ್ಟು ಹೆಚ್ಚಾಗಿದೆ. ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 16,22,857.

Advertisement

ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. 3 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾ ಧಿಸಿದೆ. ಖಾನಾಪುರ, ಯಲ್ಲಾಪುರ, ಕುಮಟಾದಲ್ಲಿ ಬಿಜೆಪಿ ಗೆದ್ದಿದ್ದು, ಕಾರವಾರ, ಹಳಿಯಾಳ, ಶಿರಸಿ, ಭಟ್ಕಳ, ಕಿತ್ತೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಭಾರೀ ಪೈಪೋಟಿ ಇದೆ.

ಕ್ಷೇತ್ರದ ಇತಿಹಾಸ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ 1951ರ ಮೊದಲ ಲೋಕಸಭಾ ಚುನಾವಣೆಯಿಂದ ಸತತ ಮೂರು ಸಲ ಜೋಕಿಂದಾದ ಆಳ್ವ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 1967ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ದಿನಕರ ದೇಸಾಯಿ ಗೆದ್ದಿದ್ದರು. 1971ರಿಂದ 1991ರ ತನಕ ಸತತ 6 ಸಲ ಕಾಂಗ್ರೆಸ್‌ ಗೆದ್ದಿದ್ದು, ಈ ಪೈಕಿ ದೇವರಾಯ ಜಿ.ನಾಯ್ಕ ಸತತ ನಾಲ್ಕು ಸಲ ಸಂಸದರಾಗಿದ್ದಾರೆ. 1996ರಲ್ಲಿ ಬಿಜೆಪಿ ಮೊದಲ ಬಾರಿ ಅನಂತ ಕುಮಾರ್‌ ಹೆಗಡೆ ಮೂಲಕ ಗೆದ್ದಿದೆ. 1998ರಲ್ಲಿ ಮತ್ತೆ ಕಮಲ ಅರಳಿತು. 1999ರಲ್ಲಿ ಜೊಕಿಂ ಆಳ್ವರ ಸೊಸೆ ಮಾರ್ಗರೆಟ್‌ ಆಳ್ವ ಮತ್ತೆ ಕಾಂಗ್ರೆಸ್‌ನಿಂದ ಗೆದ್ದರು. ಆದರೆ 5 ವರ್ಷಗಳ ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಮಾರ್ಗರೆಟ್‌ ಅವರು ಬಿಜೆಪಿ ಎದುರು ಸೋತಿದ್ದರು. 2014, 2019ರಲ್ಲೂ ಬಿಜೆಪಿ ಗೆಲ್ಲುವ ಮೂಲಕ ಒಟ್ಟು 6 ಸಲ ಗೆಲವು ಸಾಧಿ ಸಿದೆ. ಹತ್ತು ಸಲ ಗೆದ್ದಿದ್ದ ಕಾಂಗ್ರೆಸ್‌ ಈಗ ಮತ್ತೆ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಭಾರೀ ಪ್ರಯತ್ನ ಪಡುತ್ತಿದೆ.

ಕ್ಷೇತ್ರದಲ್ಲಿ ನಿರ್ಣಾಯಕರು
ಈ ಕ್ಷೇತ್ರದಲ್ಲಿ ಮರಾಠರು, ನಾಮಧಾರಿಗಳು, ಮೀನುಗಾರರು, ದಲಿತರು, ಅಲ್ಪಸಂಖ್ಯಾಕರ ಮತಗಳು ನಿರ್ಣಾಯಕ. ಲೋಕಸಭಾ ಚುನಾವಣೆಯಲ್ಲಿ ಶಿರಸಿಯವರೇ ಹತ್ತು ಸಲ ಲೋಕಸಭಾ ಸದಸ್ಯರಾಗಿದ್ದಾರೆ. ನಾಮಧಾರಿಗಳು ನಾಲ್ಕು ಸಲ, ಮರಾಠರು ಒಂದು ಸಲ, ಕರಾವಳಿ ತಾಲೂಕಿನಿಂದ ಕೊಂಕಣಿ, ನಾಡವರು ತಲಾ ಒಂದೊಂದು ಸಲ, ಹವ್ಯಕ ಸಮುದಾಯದ ಅನಂತ್‌ ಕುಮಾರ್‌ ಹೆಗಡೆ ಆರು ಸಲ ಕೆನರಾ ಲೋಕಸಭೆಯನ್ನು ಪ್ರತಿನಿಧಿಸಿದ್ದಾರೆ. ಕ್ರಿಶ್ಚಿಯನ್ನರು ನಾಲ್ಕು ಸಲ (ಜೋಕಿಂ ಆಳ್ವ ಮೂರು ಸಲ, ಮಾರ್ಗರೆಟ್‌ ಆಳ್ವ ಒಮ್ಮೆ) ಗೆದ್ದಿದ್ದಾರೆ. ಈ ಬಾರಿ ಅನಂತಕುಮಾರ್‌ ಬದಲು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಿಂದ ಅಂಜಲಿ ನಿಂಬಾಳ್ಕರ್‌ ಕಣಕ್ಕಿಳಿದಿದ್ದಾರೆ.

ರಲ್ಲಿ ಮತದಾರರ ವಿವರ 2024 2019
ಪುರುಷರು 8,15,599 7,85,884
ಮಹಿಳೆಯರು 8,07,258 7,65,868
ಒಟ್ಟು 16,22,857 15,51,752

Advertisement

ಹಾಲಿ ಸಂಸದ ಅನಂತ್‌ ಕುಮಾರ್‌ ಹೆಗಡೆ
ಪಡೆದ ಮತಗಳು – 7,86,042
ಗೆಲುವಿನ ಅಂತರ: 4, 79,649

-ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next