ಹುಬ್ಬಳ್ಳಿ: ಮುಂಬರುವ 2018ರಲ್ಲಿ ಭ್ರಷ್ಟ ರಾಜ್ಯ ಕಾಂಗ್ರೆಸ್ ಸರಕಾರವನ್ನು ರಾಜ್ಯ ಸೇರಿದಂತೆ ಇಡೀ ದೇಶದಿಂದಲೇ ಕಿತ್ತೂಗೆಯಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಡಾ| ಎಂ.ವೆಂಕಟಸ್ವಾಮಿ ಹೇಳಿದರು. ಇಲ್ಲಿನ ಗೋಕುಲ ರಸ್ತೆಯ ವಾಕರಸಾ ಸಂಸ್ಥೆಯ ಸಾಮ್ರಾಟ್ ಹಾಲ್‌ನಲ್ಲಿ ಮಂಗಳವಾರ ನಡೆದ ಧಾರವಾಡ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷ ಇನ್ನಿಲ್ಲದಂತೆ ಮಾಡುವುದೇ ನಮ್ಮ ಮುಖ್ಯ ಗುರಿ ಎಂದರು. ಕೇವಲ ಅಧಿಕಾರಕ್ಕಾಗಿ ಕಾಂಗ್ರೆಸ್‌ನವರು ದಲಿತರನ್ನು ಬಳಕೆ ಮಾಡಿಕೊಂಡರೇ ವಿನಃ ಯಾವುದೇ ಅಧಿಕಾರ ನೀಡಲಿಲ್ಲ.
ಈ ಹಿಂದೆ ನಮ್ಮ ರಾಷ್ಟ್ರಾಧ್ಯಕ್ಷ ರಾಮದಾಸ ಅಠವಲೆ ಅವರನ್ನು ಕೂಡಾ ಅವಮಾನಿಸಲಾಗಿದ್ದು, ಇದನ್ನು ರಿಪಬ್ಲಿಕನ್ ಪಕ್ಷ ಮರೆತ್ತಿಲ್ಲ. ಇದಕ್ಕೆ ಈಗಾಗಲೇ ಉತ್ತರ ನೀಡಲಾಗಿದ್ದು, ಇಡೀ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವುದೇ ನಮ್ಮ ಮೂಲ ಗುರಿ ಎಂದರು. ರಾಜ್ಯದಲ್ಲಿ ದಲಿತರು ಅಧಿಕಾರಕ್ಕೆ ಬರಬೇಕೆಂದರೇ ಇಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಸಂಪೂರ್ಣ ಕಿತ್ತೂಗೆಯಬೇಕು.
ಮುಂದಿನ ಬಾರಿ ದಲಿತ ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮಾಸೆಯಾಗಿದೆ. ಈ ಕುರಿತು ಈಗಾಗಲೇ ಎಲ್ಲ ರೀತಿಯ ರಾಜಕೀಯ ತಂತ್ರಗಳನ್ನು ನಡೆಸಲಾಗುತ್ತಿದೆ. ಕುರಿ ಕಾಯುವವ ಮುಖ್ಯಮಂತ್ರಿ ಆಗಬಹುದು, ಊರು ಕಾಯುವ ದಲಿತ ಮುಖ್ಯಮಂತ್ರಿಯಾಕಾಗಬಾರದು ಎಂದರು. ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ.
ಅಂತಹ ಸಂದರ್ಭದಲ್ಲಿ ರಿಪಬ್ಲಿಕ್ ಪಾರ್ಟಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಈ ಕುರಿತು ರಾಜ್ಯದ ಎಲ್ಲ ಪದಾಧಿಕಾರಿಗಳು ಬೂತ್ ಮಟ್ಟದಿಂದಲೇ ಕಾರ್ಯ ಪ್ರವೃತ್ತರಾಗಬೇಕು. ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಸುಮಾರು 15ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಯಲ್ಲಿ ಆಯ್ಕೆಯಾಗಲೇ ಬೇಕು. ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಬೇಕು ಎಂದರು.
ಸಮತಾ ಸೈನಿಕ ದಳದ ಪಿತಾಂಬ್ರಪ್ಪ ಬೀಳಾರ, ಮಾ ತಿಮ್ಮಯ್ಯ, ಆನಂದ ಮಾಲೂರ, ಕೃಷ್ಣಪ್ಪ ಗುಡಿಸಾಗರ ಮಾತನಾಡಿದರು. ಹನುಮಂತಪ್ಪ ಡಾವಣಗೇರಿ, ಚಂದ್ರಪ್ಪ, ಫಾತಿಮಾ, ಪ್ರಿಯಾ ಚಂದ್ರಶೇಖರ, ಹನುಮಂತಪ್ಪ ಅಗಸಿಮನಿ, ತಿಮ್ಮಯ್ಯ, ಶ್ರೀಕಾಂತ, ಮಹದೇವಸ್ವಾಮಿ, ಹಾಶಂ ಇಳಕಲ್ಲ, ಶೀಕಾಂತ ತಳಕೇರಿ, ಪರಶುರಾಮ ಶಿಂಧೆ, ಚಿಂತನ, ಅಮಿನಸಾಬ್, ಅರೋಜಿನಿ ಅರಗೆ, ಕವಿತಾ ಕಾಂಬಳೆ, ಅಶೋಕ ಕಾಂಬಳೆ ಇತರರಿದ್ದರು.