ಪಣಜಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ ನಂತರ ಗೋವಾದಲ್ಲಿ ಕಾಂಗ್ರೆಸ್ ನಾಯಕರ ಖುಷಿ ಮುಗಿಲು ಮುಟ್ಟಿದೆ.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಮಿತ್ ಪಾಟ್ಕರ್ ಅವರು ಪ್ರತಿಕ್ರಿಯೆ ನೀಡಿದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಮತ್ತು ಕರ್ನಾಟಕದಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ನಾನು ಕರ್ನಾಟಕದ ಜನತೆಗೆ ಧನ್ಯವಾದ ಹೇಳುತ್ತೇನೆ. ಭ್ರಷ್ಟಾಚಾರ, ನಿರುದ್ಯೋಗ, ಸಾಮಾಜಿಕ ತಾರತಮ್ಯ, ಹಣದುಬ್ಬರ ಮತ್ತು ಹಣದ ಬಲದ ವಿರುದ್ಧ ಜನರು ಮತ ಹಾಕಿದ್ದಾರೆ. ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದಿಂದ ರಕ್ಷಿಸಲು ಇದು ಸಾರ್ವಜನಿಕ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್‍ನ ಗೆಲುವು ಸರ್ವಾಧಿಕಾರದ ವಿರುದ್ಧ ಜನರ ಗೆಲುವು. ಕಾಂಗ್ರೆಸ್ ಪಕ್ಷದ ಗೆಲುವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ ಎಂದು ಗೋವಾ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬೀನಾ ನಾಯಕ್ ಹೇಳಿದ್ದಾರೆ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಕರ್ನಾಟಕದ ಜನತೆಯ ಗೆಲುವು. 40 ರಷ್ಟು ಮತದಾರರು ಪ್ರತ್ಯೇಕತಾವಾದಿ ಶಕ್ತಿಗಳ ವಿರುದ್ಧ ಮತ ಹಾಕಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯು ಬಜರಂಗದಳ, ಟಿಪ್ಪು ಸುಲ್ತಾನ್ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಧ್ರುವೀಕರಣಗೊಳಿಸಲು ಪ್ರಯತ್ನಿಸಿದೆ. ಆದರೆ, ಕಾಂಗ್ರೆಸ್ ಕೇಂದ್ರ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕರ್ನಾಟಕ ಚುನಾವಣೆಯಲ್ಲಿ ಫಲ ನೀಡಿದೆ ಎಂದು ಗೋವಾ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಿರೀಶ್ ಚೋಡಣಕರ್ ಹೇಳಿದರು .
ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಹಕಾರಿಯಾಗಿದೆ. ಬಿಜೆಪಿಯ ಸುಳ್ಳನ್ನು ಜನ ತಿರಸ್ಕರಿಸಿದ್ದಾರೆ ಎಂಬುದನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ತೋರಿಸುತ್ತದೆ. ಬಿಜೆಪಿ ಸರ್ಕಾರದ ಹಣದುಬ್ಬರ, ಅಧಿಕ ತೆರಿಗೆ ಮತ್ತು ವಿಪರೀತ ಖರ್ಚು ನೋಡಿದ ಜನರು ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ದಕ್ಷಿಣ ಗೋವಾ ಸಂಸದ ಫ್ರಾನ್ಸಿಸ್ ಸರ್ದಿನ್ ಪ್ರತಿಕ್ರಿಯೆ ನೀಡಿದರು.