ಶಿವಮೊಗ್ಗ: ಉಪಚುನಾವಣೆ ಈ ಬಾರಿ ಜಿದ್ದಾಜಿದ್ದಿನ ಕಣವಾಗಿದೆ. ನಮ್ಮದೇ ಸರ್ಕಾರ ಇರುವುದರಿಂದ ಮೂರೂ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುವ ಲಕ್ಷಣವಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ-ಡಿಸಿಎಂ ಸೇರಿ ಎಲ್ಲಾ ಸಚಿವರು ಚನ್ನಪಟ್ಟಣವನ್ನು ಜಿದ್ದಾಜಿದ್ದಿಯ ಕಣ ಎಂದು ಪರಿಗಣಿಸಿದ್ದಾರೆ.
ಬಳ್ಳಾರಿ ಮತ್ತು ಶಿಗ್ಗಾವಿಯಲ್ಲೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ ಮೂರು ಕ್ಷೇತ್ರದಲ್ಲೂ ಗೆಲುವು ನಮ್ಮದೇ. ಆದರೆ ರಾಜಕೀಯದಲ್ಲಿ ಮುಂದೆ ಏನು ಅಂತಾ ಗೊತ್ತಿಲ್ಲ ಎಂದರು.
ಕಾಂಗ್ರೆಸ್‌ಗೆ ಅಭ್ಯರ್ಥಿ ಇಲ್ಲದ ಸ್ಥಿತಿ ಬಂದಿದೆ ಎಂಬ ಆರೋಪ ಸುಳ್ಳು. ರಾಜಕೀಯ ನಿಂತ ನೀರಲ್ಲ ಹರಿಯುತ್ತಿರುತ್ತದೆ. ಡಿ.ಕೆ. ಸುರೇಶ್ ಇದ್ದರು. ಡಿಸಿಎಂ ನಾನೇ ಅಭ್ಯರ್ಥಿ ಎಂದಿದ್ದರು. ಯೋಗೇಶ್ವರ್ ಬಿಜೆಪಿಯಲ್ಲಿ ನೊಂದು ಕಾಂಗ್ರೆಸ್‌ಗೆ ಬಂದಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಧೋರಣೆ ಖಂಡಿಸಿ ಅಲ್ಲಿಂದ ಹೊರಬಂದಿದ್ದಾರೆ ಎಂದರು.
ಬೇರೆ ಬೇರೆ ಪಕ್ಷದಲ್ಲಿ ಇದ್ದಾಗ ಜಿದ್ದಾಜಿದ್ದಿ ಇರುತ್ತದೆ. ಪಕ್ಷಕ್ಕೆ ಬಂದ ಮೇಲೆ ಸರಿ ಆಗುತ್ತದೆ. ನಮ್ಮಲ್ಲಿ ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ. ಎಂಎಲ್ಸಿಯಾಗಿ ರಾಜೀನಾಮೆ ಕೊಟ್ಟು ಬಂದ ಮೇಲೆ ನಾವು ಬೇಡ ಎನ್ನಲು ಆಗುತ್ತದೆಯೇ. ನಮ್ಮ ಪಕ್ಷದಲ್ಲೇ ಇದ್ದು ಅಲ್ಲಿಗೆ ಹೋಗಿದ್ದರು. ಈ ಚುನಾವಣೆಯಲ್ಲಿ ಯೋಗೇಶ್ವರ್ ಗೆದ್ದೇ ಗೆಲ್ಲುತ್ತಾರೆ ಎಂದರು.
ಬಿಜೆಪಿಯಿಂದ ನಾಲ್ಕೈದು ಜನ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಅವರು ಹೇಳಿದ್ದಾರೆ. ಬಿಜೆಪಿಯಲ್ಲಿ ಅಸಮಾಧಾನ ಬಹಳ ಇದೆ. ವಿಜಯೇಂದ್ರ, ಆರ್.ಅಶೋಕ್ ಅವರದ್ದು ಏನೂ ನಡೆಯುತ್ತಿಲ್ಲ. ಎಲ್ಲ ಕುಮಾರಸ್ವಾಮಿಯವರದ್ದೇ ನಡೆಯುತ್ತಿರೋದು. ಹಾಗಾಗಿ ಬಿಜೆಪಿಯಲ್ಲಿ ಸಾಕಷ್ಟು ಗೊಂದಲವಿದೆ. ಬಿಜೆಪಿಯಲ್ಲಿ ವಿಜಯೇಂದ್ರ ವಿರುದ್ಧ ಸಾಕಷ್ಟು ಅಸಮಾಧಾನ ಇದೆ ಎಂದರು.