Advertisement

ಕಾಂಗ್ರೆಸ್‌ ಶಿಕಾರಿಗೆ ಬಿಜೆಪಿ ಬಲಿ

11:01 AM Jun 04, 2019 | Suhan S |

ಶಿಕಾರಿಪುರ: ಸ್ಥಳೀಯ ಚುನಾವಣೆಯಲ್ಲಿ ಸೋಮವಾರ ಫಲಿತಾಂಶ ಪ್ರಕಟವಾಗಿದ್ದು, ಶಿಕಾರಿಪುರ ಪುರಸಭೆಯಲ್ಲಿ ಎಲ್ಲರ ಲೆಕ್ಕಾಚಾರ ತೆಲೆ ಕೆಳಗಾಗಿಸಿ ಫಲಿತಾಂಶ ಹೊರಬಂದಿದೆ.

Advertisement

ಒಟ್ಟು 23 ವಾರ್ಡ್‌ಗಳಿಗೆ ನಡೆದ ಈ ಬಾರಿನ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಪಡೆದರೆ ಪಕ್ಷೇತರರು 3 ಸ್ಥಾನ, ಬಿಜೆಪಿ 8 ಸ್ಥಾನ ಮಾತ್ರ ಪಡೆಯಲು ಸಾಧ್ಯವಾಗಿದೆ. ಸ್ಥಳೀಯ ಚುನಾವಣೆಗಳು ಪಕ್ಷಗಳಿಗಿಂತ ವ್ಯಕ್ತಿಗೆ ಪ್ರಾಮುಖ್ಯತೆ ನೀಡುತ್ತಾರೆ ಎಂಬುದಕ್ಕೆ ಶಿಕಾರಿಪುರ ಸಾಕ್ಷಿಯಾಗಿದೆ.

ಕಾಂಗ್ರೆಸ್‌ ಪಕ್ಷ ಮೇಲುಗೈ: ಕಳೆದ ಬಾರಿ 7 ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಈ ಬಾರಿ 12 ಸ್ಥಾನ ಪಡೆದು ಪುರಸಭೆ ಅಧ್ಯಕ್ಷ ಗಾದಿಗೆ ಹತ್ತಿರವಾಗಿದೆ. ಪುರಸಭೆಯಾದ ನಂತರ ಕೇವಲ ಒಂದೆರಡು ಬಾರಿ ಅಧಿಕಾರ ನಡೆಸಿದ್ದ ಕಾಂಗ್ರೆಸ್‌ಗೆ 2019ರಲ್ಲಿ ಮತ್ತೆ ಅದೃಷ್ಟ ಒಲಿದು ಬಂದಿದೆ. ಈ ಬಾರಿ ಪಕ್ಷೇತರರು ಮೂರು ಸ್ಥಾನ ಗೆದ್ದು ನಿರ್ಣಾಯಕ ಸ್ಥಾನದದಲ್ಲಿದ್ದಾರೆ. ಅದರಲ್ಲಿ ಇಬ್ಬರು ಬಂಡಾಯ ಬಿಜೆಪಿಯವರಾಗಿದ್ದು , ಇನ್ನೊಬ್ಬ ರು ಪಕ್ಷೇತರ ಸದಸ್ಯರು ಬಿಜೆಪಿಯಲ್ಲಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಶಿಕಾರಿಪುರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಕೆಲ ತಪ್ಪು ನಿರ್ಧಾರಗಳಿಂದ ಬಿಜೆಪಿಗೆ ಹಿನ್ನಡೆ: ಬಹುತೇಕ ಅವಧಿಯಲ್ಲಿ ಬಿಜೆಪಿ ಶಿಕಾರಿಪುರ ಪುರಸಭೆ ಆಡಳಿತ ನಡೆಸಿತ್ತು. ಇದರಂತೆ ಈ ಬಾರಿಯು ಪುರಸಭೆಯ ಆಡಳಿತ ಬಿಜೆಪಿ ತೆಕ್ಕೆಗೆ ಹೋಗುವ ನಿರೀಕ್ಷೆ ಸುಳ್ಳಾಗಿದೆ. ಪುರಸಭೆಯ ಚುನಾವಣೆಯ ಆಯ್ಕೆ ಪಕ್ರಿಯೆಯಲ್ಲಿ ಬಿಜೆಪಿ ತೆಗೆದುಕೊಂಡ ನಿರ್ಧಾರಗಳು ಬಿಜೆಪಿಗೆ ಮಾರಕವಾಗಿದೆ. ಈ ಬಾರಿ ಮತದಾರ ಹೊಸಬರಿಗೆ ಮತ್ತು ಯುವಕರಿಗೆ ಸಹಜವಾಗಿಯೆ ಮಣೆಹಾಕಿದ್ದಾರೆ. ಶಿಕಾರಿಪುರ ಪುರಸಭೆಯ ಸದಸ್ಯರಾಗಿ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ರಾಜಕೀಯ ಜೀವನ ಆರಂಭಿಸಿದ್ದು , ಈ ಬಾರಿ ಪುರಸಭೆ ಬಿಜೆಪಿ ಕೈಬಿಟ್ಟು ಹೋಗಿದೆ.

ವ್ಯಕ್ತಿ ವರ್ಚಸ್ಸಿಗೆ ಮನ್ನಣೆ: ಹಿಂದಿನ ಪುರಸಭೆ ಆಡಳಿತದಲ್ಲಿ ಇ ಸೊತ್ತು ಹಾಗೂ ಕೆಲವು ಭ್ರಷ್ಟಾಚಾರದ ಪ್ರಸಂಗಗಳು ಮತದಾರ ಹೊಸಬರನ್ನು ಆಯ್ಕೆ ಮಾಡಲು ಕಾರಣವಾಗಿದೆ. ಆದರೂ ವ್ಯಕ್ತಿಯ ವರ್ಚಸ್ಸಿನ ಮೇಲೆ ಹಳಬರಾದ ಮಾಜಿ ಅಧ್ಯಕ್ಷೆ ರೂಪಕಲಾ ಹೆಗಡೆ , ಮಾಜಿ ಸದಸ್ಯ ಪಾಲಾಕ್ಷಪ್ಪ, ಮಹೇಶ್‌ ಹುಲ್ಮಾರ್‌, ಎಸ್‌.. ನಾಗರಾಜ ಗೌಡ ಆಯ್ಕೆಯಾಗಿದ್ದರೆ.

Advertisement

ಮಾಜಿ ಅಧ್ಯಕ್ಷರಿಗೆ ಸೋಲು: ಬಿಜೆ.ಪಿಯ ಹಿರಿಯ ಮುಖಂಡ ಹಾಗೂ ಮೂರು ಭಾರಿ ಪುರಸಭೆ ಅಧ್ಯಕ್ಷರಾಗಿದ್ದ ಟಿ.ಎಸ್‌. ಮೋಹನ್‌, ಮಾಜಿ ಪುರಸಭಾ ಅಧ್ಯಕ್ಷ ಕೆ.ಜಿ. ವಸಂತಗೌಡ ಅವರು ಸೋಲುಂಡಿದ್ದಾರೆ.

ಬಿ.ಎಸ್‌. ಯಡಿಯೂರ್ಪಪ ಅವರ ನಿವಾಸವಿರುವ ವಾರ್ಡ್‌ ನಂ. 14ರಲ್ಲಿ ಬಿಜೆಪಿ ಅಭ್ಯರ್ಥಿ ಲೀಲಾವತಿ ಅವರನ್ನು ಮಣಿಸುವ ಮೂಲಕ ಮಾಜಿ ಶಾಸಕ ಶಾಂತವೀರಪ್ಪ ಗೌಡರ ಸೊಸೆ ಶ್ವೇತಾ ರವೀಂದ್ರ ಗೆಲುವಿನ ನಗೆ ಬೀರಿದ್ದು, ಈ ವಾರ್ಡ್‌ನ್ನು ಕಾಂಗ್ರೆಸ್‌ ತನ್ನ ತಕ್ಕೆಗೆ ಹಾಕಿಕೊಂಡಿದೆ.

ಕೆಲವು ದಿನಗಳ ಹಿಂದೆ 14 ನೇ ವಾರ್ಡ್‌ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರೀ ಗೊಂದಲ ಉಂಟಾಗಿ ಬಿಜೆಪಿ ಮುಖಂಡರು ಕಾಂಗ್ರೆಸ್‌ ಪಕ್ಷದ ಮುಖಂಡರ ವಿರುದ್ಧ ಪಟ್ಟಣದ ಪೊಲೀಸ್‌ ಠಾಣೆ ಎದರು ಧರಣಿ ನಡೆಸಿತ್ತು. ಅಂದಿನಿಂದ ಕಾಂಗ್ರೆಸ್‌-ಬಿಜೆಪಿ ಈ ವಾರ್ಡನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹರಸಹಾಸ ಮಾಡಿದ್ದವು. ಈ ಪೈಪೋಟಿಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದು ಬೀಗಿದೆ.

ಗಮನ ಸೆಳೆದ ಪಕ್ಷೇತರರು: ಈ ಭಾರಿಯ ಪುರಸಭಾ ಚುನಾವಣೆಯಲ್ಲಿ ಮೂವರು ಪಕ್ಷೇತರರು ಗೆಲುವು ಪಡೆದಿದ್ದಾರೆ. ವಾರ್ಡ್‌ 1ರ ಪಕ್ಷೇತರ ಅಭ್ಯರ್ಥಿ ಜೀನಳ್ಳಿ ಪ್ರಶಾಂತ, 16ನೇ ವಾರ್ಡ್‌ ಪಕ್ಷೇತರ ಅಭ್ಯರ್ಥಿ ರೇಖಾಬಾಯಿ, 8ನೇ ವಾರ್ಡ್‌ ಸಾಧಿಕ್‌ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷ ಗಾದಿ ಮೇಲೆ ಕಣ್ಣು: ಮೀಸಲಾತಿ, ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸಾಮಾನ್ಯ ಮಹಿಳೆ ಮೀಸಲಾತಿಯಿದೆ. ಹೀಗಾಗಿ ಶ್ವೇತಾ ರವಿಂದ್ರ, ಕಮಲಮ್ಮ ಹುಲ್ಮಾರ್‌, ಜ್ಯೋತಿ ಹರಿಹರ ಸಿದ್ದಲಿಂಗಪ್ಪ ಇತರರು ರೇಸ್‌ ನಲ್ಲಿದ್ದಾರೆ

ಲಾಟರಿ ಮೂಲಕ ಆಯ್ಕೆ: 4ನೇ ವಾರ್ಡ್‌ನಲ್ಲಿ ಬಿಜೆಪಿಯ ರೇಣುಕಸ್ವಾಮಿ ಹಾಗೂ ಕಾಂಗ್ರೆಸ್‌ ರೇಣುಕಯ್ಯ ಸಮಾನವಾರಿ 283 ಮತ ಪಡೆದಿದ್ದರಿಂದ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಬಿಜೆಪಿ ರೇಣುಕಸ್ವಾಮಿ ಆಯ್ಕೆಯಾದರು. ಅದೇ ರೀತಿ 5ನೇ ವಾರ್ಡ್‌ನಲ್ಲಿ ಬಿಜೆಪಿ ಎಚ್.ಎಂ. ಜ್ಯೋತಿ ಹಾಗೂ ಕಾಂಗ್ರೆಸ್‌ನ ಎಚ್.ಎಸ್‌. ಜ್ಯೋತಿ ಸಮನಾಗಿ 212 ಮತ ಪಡೆದಾಗ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಕಾಂಗ್ರೆಸ್‌ನ ಎಚ್.ಎಸ್‌. ಜ್ಯೋತಿ ಆಯ್ಕೆಯಾದರು

ಕಾಂಗ್ರೆಸ್‌ ಸಂಭ್ರಮಾಚರಣೆ: ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳು ಲಭಿಸುತ್ತಿದ್ದಂತೆ ಮತ ಎಣಿಕೆಯ ಕೇಂದ್ರದ ಎದರು ಇರುವ ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಘೋಷಣೆ ಕೂಗಿ ನಾಯಕರನ್ನು ಎತ್ತಿ ಕುಣಿದು ಸಂಭ್ರಮಿಸಿದರು. ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತಸ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next