ಕಲಬುರಗಿ: ರಕ್ಷಣಾ ವಲಯದಲ್ಲಿ ಗುತ್ತಿಗೆ ಪದ್ಧತಿ ಮತ್ತು ದಿನಗೂಲಿ ಆಧಾರದಲ್ಲಿ ಉದ್ಯೋಗ ನೀಡಲು ಹೊರಟಿರುವ ಕೇಂದ್ರ ಸರಕಾರ ನಿರ್ದಾರ ತಪ್ಪು. ರಕ್ಷಣಾ ಕೇವಲ ನಾಲ್ಕೇ ವರ್ಷಕ್ಕೆ ಮನೆಗೆ ಹೋಗಿ ಅಂದ್ರೆ ಹೇಗಾಗುತ್ತೆ? ಇದನ್ನು ಪ್ರತಿಭಟಿಸಿ ನಾಳೆ ದೆಹಲಿಯ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಸತ್ಯಾಗ್ರಹ ಮಾಡಲಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇನೆ ಭರ್ತಿಯಾಗುವ ಯುವಕರು ಸರ್ವಸ್ವ ತ್ಯಾಗ ಮಾಡಲು ಸಿದ್ದತೆ ಮಾಡಿಕೊಂಡು ಬಂದಿರುತ್ತಾರೆ. ಅವರಿಗೆ ದೇಶ ಸೇವೆ ಮಾಡುವ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು. ಏಕಾಏಕಿಯಾಗಿ ಇಂತಹ ನಿರ್ಧಾರ ಪ್ರಕಟಿಸುವ ಮುನ್ನ ಜನತೆಯ ಅಭಿಪ್ರಾಯ ಸಂಗ್ರಹವೂ ಮುಖ್ಯವಾಗುತ್ತದೆ ಎಂದರು.
ಯುವ ಉದ್ಯೋಗಾಕಾಂಕ್ಷಿಗಳಿಗೆ ಟ್ರೈನಿಂಗ್ ಕೊಟ್ಟು ನಾಲ್ಕು ವರ್ಷದಲ್ಲಿ ಅವರನ್ನು ನಿವೃತ್ತಿಗೊಳಿಸಿದರೆ ಯಾವ ಸೈನಿಕ ಕೂಡ ವೆಲ್ ಟ್ರೈನ್ಡ್ ಆಗಿ ಹೊರ ಬರುವುದಿಲ್ಲ. ಅದೂ ಅಲ್ಲದೆ ಅವರನ್ನು ಗುತ್ತಿಗೆ ಲೇಬರ್ ರೀತಿಯಲ್ಲಿ ನೋಡುವುದು ಸರಕಾರಕ್ಕೆ ಶೋಭೆ ತರುವುದಲ್ಲ. ರಕ್ಷಣಾ ವಿಷಯವನ್ನು ಪ್ರಧಾನಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಎಷ್ಟು ಲಘುವಾಗಿ ಪರಿಗಣಿಸಿದ್ದಾರೆ ಎನ್ನಲು ಇಂತಹ ಅವೈಜ್ಞಾನಿಕ ನಿರ್ಧಾರಗಳು ಸಾಕ್ಷ್ಯಿ ಎಂದರು.
ದೇಶದಲ್ಲಿ ಹಿಂಸಾಚಾರ ತಿರುಗುತ್ತಿದೆ. ಇನ್ನಷ್ಟು ಅನಾಹುತ ಆಗುವ ಮುನ್ನವೇ ಸರಕಾರ ಸೂಕ್ತವಾದ ನಿರ್ಧಾರ ಕೈಗೊಳ್ಳಬೇಕು ಎಂದ ಅವರು, ಈ ವಿಷಯದಲ್ಲಿ ದೇಶದ ಜನರ ಜತೆಗೂ ರಾಜಕೀಯ ಮಾಡುವುದನ್ನು ಬಿಜೆಪಿ ನಿಲ್ಲಿಸಬೇಕು. ದೇಶಾಭಿಮಾನ, ತ್ಯಾಗ, ದೇಶ ಸೇವೆಯ ಮಾತನಾಡುವಂತಹ ಜನರಿಂದಲೇ ಇಂತಹ ನಿರ್ಧಾರಗಳು ಹೊರ ಬೀಳುತ್ತಿರುವುದು ಅಚ್ಛೆ ದಿನಗಳ ಮಾದರಿ ಎಂದು ಖೇದ ವ್ಯಕ್ತಪಡಿಸಿದರು.
ಮೊದಲು ಹುದ್ದೆ ಭರ್ತಿ ಮಾಡಿ: ದೇಶದಲ್ಲಿ ಯುವ ಜನತೆಯ ಜತೆಯಲ್ಲಿ ಸುಖಾಸುಮ್ಮನೆ ನಾಟಕವಾಡಿ ಅವರನ್ನು ಹುಯಿಲೆಬ್ಬಿಸುವ ಬದಲು, ಕಳೆದ ಹಲವಾರು ವರ್ಷಗಳಿಂದ ಖಾಲಿ ಇರುವ ರಕ್ಷಣಾ ಇಲಾಖೆ, ರಾಜ್ಯದಲ್ಲಿ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲೂ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಇದರ ಹಿಂದೆಯೂ ದೊಡ್ಡ ಷಡ್ಯಂತ್ರವಿದೆ. ಧರ್ಮದ ಲೆಕ್ಕಚಾರವಿದೆ. ಜನರಿಗೆ ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ರಾಹುಲ್ ಎರಡು ಕಡೆ ಸ್ಪರ್ಧೆ ತಪ್ಪಿಸಲು ಇಡಿ ಸಂಕಟ: ಪ್ರಧಾನಿ ಮೋದಿ ಅವರ ತಲೆಯಲ್ಲಿ ಏನು ಲೆಕ್ಕಾಚಾರ ನಡೆಯುತ್ತಿದೆಯೆಂದು ನನಗೆ ಚೆನ್ನಾಗಿ ಗೊತ್ತಿದೆ. ರಾಹುಲ್ ಎರಡು ಕಡೆ ಸ್ಪರ್ಧೆ ಮಾಡಬಾರದು ಎನ್ನುವ ಕಾರಣಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ಛೂ ಬಿಟ್ಟಿದ್ದಾರೆ. ಇದೆಲ್ಲವೂ ನಾವು ನೋಡದೆ ಇರುವುದೆದೇನಲ್ಲ. ನ್ಯಾಷನಲ್ ಹೆರಾಲ್ಡ್ ನಮ್ಮ ಪಕ್ಷದ ಆಸ್ತಿ. ನಮ್ಮದನ್ನು ನಾವು ಉಳಿಸಿಕೊಳ್ಳದೇ ಹೋದರೆ ನೆಹರು ಅವರು ಯಾವ ಉದ್ದೇಶಕ್ಕೆ ಪತ್ರಿಕೆ ಕಟ್ಟಿದ್ದರೋ ಅದು ವಿಫಲವಾಗುತ್ತದೆ. ನಮ್ಮ ತತ್ವ ಸಿದ್ಧಾಂತಗಳನ್ನು ಉಳಿಸಿಕೊಳ್ಳಲು ನಿಟ್ಟಿನಲ್ಲಿ ಹೋರಾಟ ಮಾಡಲಾಗುತ್ತಿದೆ. ದೇಶದ ಜನರ ಮುಂದೆ ಸೋನಿಯಾ ಮತ್ತು ರಾಹುಲ್ ಅವರ ಇಮೇಜ್ ಕುಗ್ಗಿಸಲು ಕೇಂದ್ರ ಸರಕಾರ ಮತ್ತು ಮೋದಿ ಅವರು ಇಂತಹ ಇಡಿ ನಾಟಕ ಆಡುತ್ತಿದ್ದಾರೆ. ಇದನ್ನು ದೇಶದ ಜನರೂ ನೋಡುತ್ತಿದ್ದಾರೆ. ಕೇಂದ್ರ ಕೀಳು ರಾಜಕಾರಣ ಮಾಡಲು ದೇಶದ ಉನ್ನತ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇದು ಸರಕಾರದ ದುರಾದೃಷ್ಟ ಎಂದರು.