ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೋಡಾ ಚೀಟಿ ಪಡೆಯಲು ಸಿದ್ದವಾಗಲಿ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಶೀಘ್ರದಲ್ಲಿ ಕುಮಾರಸ್ವಾಮಿ ಅವರಿಗೆ ತಲಾಕ್ ನೀಡಲಿದೆ.ಅವರು ಸೋಡಾ ಚೀಟಿ ಪಡೆಯಲು ಸಿದ್ದವಾಗಿರಲಿ ಎಂದರು.
ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರಾಗಿರುವ ಅಶೋಕ್ ಪರಿಷತ್ ಪ್ರತಿಪಕ್ಷ ನಾಯಕರ ನೇತೃತ್ವದಲ್ಲಿ ಸಿಎಜಿ ವರದಿ ಸಿದ್ದಪಡಿಸಲಾಗಿದ್ದು , ಸದನದಲ್ಲಿ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಶಾಸಕರ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ಅವರ ತೀರ್ಮಾನ ನನಗೆ ಗೊತ್ತಿಲ್ಲ.ವಿಶ್ವಾಸ ಪ್ರೀತಿ ಇರುವ ಕಾರಣ ಭಾಗಿಯಾಗಿದ್ದಾರೆ. ಅವರ ಮತ್ತು ಸಚಿವ ಡಿ.ಕೆ.ಶಿವಕುಮಾರ್ ನಡುವಿನ ಸಂಬಂಧದ ಕುರಿತು ಎಲ್ಲರಿಗೂ ಗೊತ್ತಿದೆ. ಇಬ್ಬರ ನಡುವೆ ಎಣ್ಣೆ ಸೀಗೆ ಕಾಯಿ ಸಂಬಂಧ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಕಾಂಗ್ರೆಸ್‌ನ ನೀತಿ , ಹಿಂದೆ ದೇವೇಗೌಡರಿಗೆ ಸಂಸತ್‌ನಲ್ಲಿ ಹೇಗೆ ಗೇಟ್‌ಪಾಸ್ ಕೊಟ್ಟರೋ ಹಾಗೇ ಅದೇ ರೀತಿ ಕುಮಾರಸ್ವಾಮಿ ಅವರಿಗೆ ಕೊಡುತ್ತಾರೆ. ಅವರು ಯಾವುದಕ್ಕೂ ಸಿದ್ದರಾಗಿರುವುದು ಒಳ್ಳೆಯದು. ಈ ಸರ್ಕಾರ ಶೀಘ್ರ ಪತನವಾಗುವ ವಿಶ್ವಾಸ ನಮಗೆ ಇದೆ ಎಂದರು.
ಸದನದಲ್ಲಿ ಬಾವಿಗಳಿದು ಪ್ರತಿಭಟನೆ
ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಶಾಸಕರು ವಿಧಾನಸಭಾ ಕಲಾಪದಲ್ಲಿ ಸದನದ ಬಾವಿಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ.ಈ ವೇಳೆ ತೀವ್ರ ವಾಗ್ವಾದ ನಡೆಯುತ್ತಿದೆ.